10 ವರ್ಷಗಳ ಹಿಂದಿನ ಪ್ರಕರಣದಲ್ಲಿ ಈಗ ದಾವೆ ಹೂಡಲಿರುವ ಅಥ್ಲೀಟ್!

ಬುಧವಾರ, 4 ಜನವರಿ 2017 (15:04 IST)
ನವದೆಹಲಿ: ಶಾಂತಿ ಸೌಂದರಾಜನ್ ಎಂಬ ಅಥ್ಲಿಟ್ ನ್ನು ಬಹುಶಃ ನಾವೆಲ್ಲಾ ಮರೆತೇ ಬಿಟ್ಟಿದ್ದೇವೆ. ಸುಮಾರು 10 ವರ್ಷಗಳ ಹಿಂದೆ ನಡೆದ ದೋಹಾ ಏಷ್ಯನ್ ಗೇಮ್ಸ್ ನಲ್ಲಿ ಲಿಂಗ ಪರೀಕ್ಷೆಯಲ್ಲಿ ವಿಫಲರಾಗಿದ್ದರೆಂಬ ಕಾರಣಕ್ಕೆ ಅವರು ಗೆದ್ದಿದ್ದ ಬೆಳ್ಳಿ ಪದಕವನ್ನು ಹಿಂಪಡೆದಿದ್ದು ದೊಡ್ಡ ಸುದ್ದಿಯಾಗಿತ್ತು.

ಇದೀಗ ಆ ಪ್ರಕರಣಕ್ಕೆ ಮತ್ತೆ ಜೀವ ತುಂಬಲು ಶಾಂತಿ ನಿರ್ಧರಿಸಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಮತ್ತು ಭಾರತೀಯ ಅಥ್ಲಿಟ್ ಫೆಡರೇಷನ್ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ ದಾಖಲಿಸಲು ತೀರ್ಮಾನಿಸಿದ್ದಾರೆ.

ಅಷ್ಟು ಹಿಂದೆ ನಡೆದ ಪ್ರಕರಣಕ್ಕೆ ಈಗ ಮರುಜೀವ ನೀಡಲು ನಿರ್ಧರಿಸಿದ್ದೇಕೆ ಎಂದರೆ ಇನ್ನಷ್ಟು ಕುತೂಹಲಕಾರಿ ವಿಷಯಗಳು ಬಹಿರಂಗವಾಗುತ್ತದೆ. 2006 ರಲ್ಲಿ ನಡೆದ ಆಕೆಯ ವೈದ್ಯಕೀಯ ಪರೀಕ್ಷಾ ವರದಿಗಳು ಇದುವರೆಗೆ ಶಾಂತಿಗೆ ಲಭಿಸಿರಲಿಲ್ಲವಂತೆ. ಅದೆಲ್ಲಾ ಕೈ ಸೇರಿದ ನಂತರವಷ್ಟೇ ಪ್ರಕರಣ ಹೂಡಲು ಸಾಧ್ಯ. ಹೀಗಾಗಿಯೇ ಈಗ ಶಾಂತಿ ಕೇಸು ದಾಖಲಿಸುತ್ತಿದ್ದಾರಂತೆ.

ಆ ದಿನ ಶಾಂತಿಯನ್ನು ಅರೆ ನಗ್ನ ಸ್ಥಿತಿಯಲ್ಲಿ ಅರ್ಧ ದಿನ ನಿಲ್ಲಿಸಲಾಗಿತ್ತು. ಆಕೆಗೆ ಯಾವ ಪರೀಕ್ಷೆ ನಡೆಯುತ್ತಿದೆ ಎಂದೇ ಗೊತ್ತಿರಲಿಲ್ಲ. ವಿದೇಶಿ ವೈದ್ಯರು ಅಸಹಾಯಕ ಮಹಿಳೆಯ ಮೇಲೆ ಏನೇನೋ ಪರೀಕ್ಷೆ ನಡೆಸಿದರು ಎಂದು ಸೃಷ್ಟಿ ಮಧುರೈನ ಎನ್ ಜಿಒ ಗೋಪಿ ಶಂಕರ್ ಹೇಳಿದ್ದಾರೆ.

ಇದೂ ಸಾಲದ್ದಕ್ಕೆ ಆಕೆಯ ಮೇಲೆ ನಿಷೇಧ ಹೇರಲಾಗಿತ್ತು. ಆದರೆ ಪರಿಶಿಷ್ಟ ಜಾತಿ ಮತ್ತು ವರ್ಗದ ರಾಷ್ಟ್ರೀಯ ಸಮಿತಿ ಆಕೆಗಾದ ಅನ್ಯಾಯಗಳ ಬಗ್ಗೆ ಕ್ರೀಡಾ ಇಲಾಖೆಗೆ ಪತ್ರ ಬರೆದ ಮೇಲೆ ಆಕೆಯ ಪರಿಸ್ಥಿತಿ ಸುಧಾರಿಸಿತು. ಕಳೆದ ತಿಂಗಳಷ್ಟೇ ತಮಿಳುನಾಡಿನ ಕ್ರೀಡಾ ಇಲಾಖೆಯ ಅಥ್ಲಿಟ್ ಕೋಚ್ ಆಗಿ ಶಾಂತಿಯನ್ನು ನೇಮಕ ಮಾಡಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ