ಬೆಂಗಳೂರು: ನಗರದ ಬಸವನಗುಡಿ ಗಾಂಧಿ ಬಜಾರ್‌ನಲ್ಲಿರುವ ಸಸ್ಯಹಾರಿ ಟಿಫಿನ್ ರೆಸ್ಟೋರೆಂಟ್ ವಿದ್ಯಾರ್ಥಿ ಭವನ ಹಲವು ಸೆಲೆಬ್ರಿಟಿಗಳ ಫೆವರೆಟ್ ಸ್ಥಳವಾಗಿದೆ. 1943ರಲ್ಲಿ ಪ್ರಾರಂಭವಾದ ವಿದ್ಯಾರ್ಥಿ ಭವನ ಹೋಟೆಲ್ ದಶಕಗಳಿಂದ ಪ್ರಸಿದ್ಧಿಯನ್ನು ಹಾಗೇ ಉಳಿಸಿಕೊಂಡು, ಅದೇ ರುಚಿಯ ತಿನಿಸುಗಳನ್ನು ಬಡಿಸುತ್ತಾ ಬಂದಿದೆ.
ವಿಶಿಷ್ಟ ರುಚಿಯ ಮಸಾಲೆ ದೋಸೆಗೆ ಖ್ಯಾತವಾದ ಈ ಹೊಟೇಲ್ ಸಾಹಿತ್ಯ, ಸಾಂಸ್ಕೃತಿಕ ಲೋಕದೊಂದಿಗೂ ವಿಶಿಷ್ಟ ನಂಟು ಹೊಂದಿದೆ. ಆಗಾಗ ಈ ಹೊಟೇಲ್‌ಗಳಿಗೆ ಸೆಲೆಬ್ರಿಟಿಗಳು, ಕ್ರೀಡಾ ಲೋಕದ ದಿಗ್ಗಜರು, ಸಾಹಿತಿಗಳು ಭೇಟಿ ನೀಡಿ, ಇಲ್ಲಿನ ಫೇಮಸ್ ಮಸಾಲೆ ದೋಸೆಯನ್ನು ಸವಿಯುತ್ತಾರೆ.
ಇದೀಗ ವಿದ್ಯಾರ್ಥಿ ಭವನದ ದೋಸೆ ರುಚಿಗೆ ಮಾರುಹೋಗಿರುವ ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ ಹಾಗೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಲಕ್ಷ್ಯ ಸೇನ್‌ಗೆ ಮೆಂಟರ್ ಆಗಿದ್ದ ಪ್ರಕಾಶ್ ಪಡುಕೋಣೆ ಅವರು ಪತ್ನಿ ಸಮೇತ ಹೊಟೇಲ್‌ಗೆ ಭೇಟಿ ನೀಡಿದ್ದಾರೆ.
ಗುರುವಾರ ಸಂಜೆ ವೇಳೆ ವಿದ್ಯಾರ್ಥಿ ಭವನಕ್ಕೆ ಭೇಟಿ ಕೊಟ್ಟ ಪ್ರಕಾಶ್ ಪಡುಕೋಣೆ ಹಾಗೂ ಉಜ್ವಾಲಾ ಪಡುಕೋಣೆ ದಂಪತಿ ಅವರು ಫೇಮಸ್ ಮಸಾಲೆ ದೋಸೆಯನ್ನು ಸವಿದರು. ನಂತರ ಹೊಟೇಲ್ ಸಿಬ್ಬಂದಿ ಜತೆ ಫೋಟೋ ತೆಗೆಸಿಕೊಂಡರು. ಭೇಟಿಯ ಫೋಟೋಗಳನ್ನು ವಿದ್ಯಾರ್ಥಿ ಭವನದ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.