ಇಂದರ್‌ಜೀತ್ ಬಿ ಮಾದರಿ ಪಾಸಿಟಿವ್, ನಾಲ್ಕು ವರ್ಷ ನಿಷೇಧ ಸಾಧ್ಯತೆ

ಮಂಗಳವಾರ, 2 ಆಗಸ್ಟ್ 2016 (16:53 IST)
ಶಾಟ್ ಪುಟರ್ ಇಂದರ್‌ಜೀತ್ ಸಿಂಗ್ ರಿಯೋ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶಕ್ಕೆ ಇನ್ನೊಂದು ಪೆಟ್ಟು ಬಿದ್ದಿದ್ದು, ನಿಷೇಧಿತ ವಸ್ತುಗಳಿಗಾಗಿ ಅವರ ಬಿ ಮಾದರಿ ಪರೀಕ್ಷೆಯಲ್ಲಿ  ಪಾಸಿಟಿವ್ ಫಲಿತಾಂಶ ಬಂದಿದೆ. ಆದರೆ ಇಂದರ್‌ಜೀತ್ ತಮ್ಮ ಬಿ ಮಾದರಿಯನ್ನು ತಿದ್ದಲಾಗಿದೆ ಎಂದು ಆರೋಪಿಸಿದ್ದಾರೆ.

ಇಂದರ್‌ಜೀತ್ ಅವರ ಎ ಮಾದರಿಯಲ್ಲಿ ಆಂಡ್ರೋಸ್ಟೆರಾನ್ ಮತ್ತು ಎಟಿಯೊಚೊಲಾನೊಲೋನ್ ಸ್ಟೆರಾಯ್ಡ್‌ಗಳು ಇದ್ದಿದ್ದರಿಂದ  ಎ ಮಾದರಿ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿತ್ತು.
 
 ಬಿ ಮಾದರಿಯಲ್ಲಿ ಕೂಡ ಪಾಸಿಟಿವ್ ಫಲಿತಾಂಶ ಬಂದಿದ್ದರಿಂದ ಹೊಸ ವಾಡಾ ಸಂಹಿತೆ ಅನ್ವಯ ಅವರು ನಾಲ್ಕು ವರ್ಷಗಳ ನಿಷೇಧದ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ. ಕುಸ್ತಿಪಟು ನರಸಿಂಗ್ ಯಾದವ್ ಅವರ ವಿರುದ್ಧ ಡೋಪಿಂಗ್ ಹಗರಣ ಬೆಳಕಿಗೆ ಬಂದ ಎರಡು ದಿನದಲ್ಲಿ ಇಂದರ್‌ಜೀತ್ ಉದ್ದೀಪನಾ ಮದ್ದು ಸೇವನೆ ಪರೀಕ್ಷೆ ನಡೆದಿತ್ತು.  ನರಸಿಂಗ್ ತಾವು ಪಿತೂರಿಯ ಬಲಿಪಶು ಎಂದು ಆರೋಪಿಸಿದ ಬಳಿಕ ನಾಡಾ ವಿಚಾರಣೆ ನಡೆಸಿ ಕ್ಲೀನ್ ಚಿಟ್ ನೀಡಲಾಗಿತ್ತು. 
 
 ಇಂದರ್‌ಜೀತ್ ಕೂಡ ಇದು ತಮ್ಮ ವಿರುದ್ಧ ಒಳಸಂಚು ಎಂದು ಆರೋಪಿಸಿದ್ದಾರೆ. ಈ ದೇಶದಲ್ಲಿ ಯಾರೇ ಧ್ವನಿ ಎತ್ತಿದರೂ ಅವರ ಧ್ವನಿಯನ್ನು ಅಡಗಿಸಲಾಗುತ್ತದೆ ಎಂದು ಇಂದರ್‌ಜೀತ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ