ಪಂದ್ಯ ಗೆದ್ದು ದುರ್ವರ್ತನೆ ತೋರಿದ ಪಾಕ್ ಹಾಕಿ ತಂಡ

ಭಾನುವಾರ, 14 ಡಿಸೆಂಬರ್ 2014 (13:25 IST)
ಭಾರತ ವಿರುದ್ಧ ನಿನ್ನೆ ನಡೆದ ಚಾಂಪಿಯನ್ಸ್​ ಟ್ರೋಫಿ ಹಾಕಿ ಟೂರ್ನಿಯ ಸೆಮಿಫೈನಲ್​​ನಲ್ಲಿ ಗೆಲುವು ದಾಖಲಿಸಿದ ಪಾಕಿಸ್ತಾನಿ ಆಟಗಾರರು​​ ಕ್ರೀಡಾಸ್ಫೂರ್ತಿಯನ್ನೇ ಮರೆತು ಮೈದಾನದಲ್ಲಿಯೇ ಅಸಭ್ಯತೆಯನ್ನು ತೋರಿದ್ದಾರೆ...
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕ್​​ ನಡುವಿನ ಪಂದ್ಯ ತೀವೃ ಹಣಾಹಣಿಯಿಂದ ಕೂಡಿತ್ತು. 4-3 ಗೋಲುಗಳಿಂದ ಭಾರತೀಯ ತಂಡವನ್ನು  ಮಣಿಸುವ ಮೂಲಕ ಏಷ್ಯನ್​ ಗೇಮ್ಸ್​​ ನಲ್ಲಾದ ಸೋಲಿಗೆ ಪಾಕಿಸ್ತಾನೀಯರು ಸೇಡು ತೀರಿಸಿಕೊಂಡರು.
 
ಆದರೆ ಟೀಮ್​ ಇಂಡಿಯಾವನ್ನು ಮಣಿಸಿದ ಸಂಭ್ರಮವನ್ನು ಪಾಕ್ ಆಟಗಾರರು ತುಂಬಾ ಕೆಟ್ಟರೀತಿಯಲ್ಲಿ ಆಚರಿಸಿದ್ದು ಮಾತ್ರ ಭಾರತೀಯರನ್ನು ಆಕ್ರೋಶಗೊಳ್ಳುವಂತೆ ಮಾಡಿತು. ಕೆಲ ಆಟಗಾರರು ಮಾಧ್ಯಮಗಳ ಮುಂದೆ ಹೋಗಿ ಮಧ್ಯದ ಬೆರಳನ್ನು ತೋರಿಸಿದರು. ಶರ್ಟ್‌ಗಳನ್ನು ​​ಗಳನ್ನು ಬಿಚ್ಚಿ ಕುಣಿದಾಡಿದರು. ಅಸಹ್ಯ ಮಾತುಗಳನ್ನಾಡಿದರು. 
 
ತಂಡದ ಬಹುತೇಕ ಎಲ್ಲಾ ಆಟಗಾರರು ಒಂದಲ್ಲೊಂದು ರೀತಿಯಲ್ಲಿ ದುರ್ನಡತೆ ತೋರಿ ಕ್ರೀಡೆಯ ಘನತೆಗೆ ಕಪ್ಪುಚುಕ್ಕಿಯನ್ನಿಟ್ಟರು.
 
ತಮ್ಮ ತಂಡದ ಆಟಗಾರರ ದುರ್ನಡತೆಯ ಬಗ್ಗೆ ಖೇದ ವ್ಯಕ್ತಪಡಿಸಿದ ಪಾಕ್​​ ಕೋಚ್​ ಶಹನಾಜ್​​ ಶೇಕ್​, ಎಲ್ಲರೂ ಯುವ ಆಟಗಾರರಾಗಿದ್ದು, ತಪ್ಪನ್ನು ಮಾಡಿದ್ದಾರೆ ಎಂದು ಕ್ಷಮೆ ಯಾಚಿಸಿದ್ದಾರೆ.
 
ಪಾಕ್ ಆಟಗಾರರ ಈ ನಡತೆಯನ್ನು ಭಾರತ ತೀವೃವಾಗಿ ಖಂಡಿಸಿದೆ. ಇನ್ನು ಮುಂದೆ ಪಾಕ್ ಜತೆ ಪಂದ್ಯವನ್ನಾಡುವುದಿಲ್ಲ ಎಂದು ಭಾರತ ಹಾಕಿ ಫೆಡರೇಷನ್ ಹೇಳಿದೆ. ಇಂಟರ್‌ನ್ಯಾಶನಲ್ ಹಾಕಿ ಫೆಡರೇಷನ್ ಈ ಕುರಿತು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇದು  ಗೆಲುವಿನ ಆಚರಣೆಯ ಸಂಭ್ರಮ ಎಂದಷ್ಟೇ ಹೇಳಿ ಅದು ಸುಮ್ಮನಾಗಿದೆ.

ವೆಬ್ದುನಿಯಾವನ್ನು ಓದಿ