ಮುಂದಿನ ಮೂರು ಒಲಿಂಪಿಕ್ಸ್‌ ಸಿದ್ಧತೆಗೆ ಕಾರ್ಯಪಡೆ ಪ್ರಕಟಿಸಿದ ಮೋದಿ

ಶುಕ್ರವಾರ, 26 ಆಗಸ್ಟ್ 2016 (19:55 IST)
ತಮ್ಮ ಸರ್ಕಾರ ಮುಂದಿನ ಮೂರು ಒಲಿಂಪಿಕ್ಸ್‌ಗಳ ಸಿದ್ಧತೆಗೆ ಅಥ್ಲೀಟ್‌ಗಳಿಗೆ ನೆರವಾಗಲು ಕಾರ್ಯತಂತ್ರ ರೂಪಿಸುವುದಕ್ಕಾಗಿ ಕಾರ್ಯಪಡೆ ರಚಿಸುತ್ತದೆಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಕಾರ್ಯಪಡೆಯು ಮೂಲಸೌಲಭ್ಯ, ತರಬೇತಿ ಮತ್ತು ಆಯ್ಕೆಯನ್ನು ಒಳಗೊಂಡಿದೆ.
 
ಪ್ರಧಾನಿ ಸಂಪುಟ ಸಭೆಯಲ್ಲಿ ಶುಕ್ರವಾರ ಈ ಪ್ರಕಟಣೆಯನ್ನು ನೀಡಿದ್ದು, ಮುಂದಿನ ಕೆಲವು ದಿನಗಳಲ್ಲಿ ಈ ಕಾರ್ಯಪಡೆಯನ್ನು ಸ್ಥಾಪಿಸಲಾಗುತ್ತದೆಂದು ಹೇಳಿದರು. 
 
ಭಾರತದ ಕ್ರೀಡಾಪಟುಗಳು 2020, 2024 ಮತ್ತು 2028ರಲ್ಲಿ  ಮುಂದಿನ ಮೂರು ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳಲು ಸಮಗ್ರ ಕಾರ್ಯಯೋಜನೆ ಸಿದ್ಧಪಡಿಸಲು ಕಾರ್ಯಪಡೆ ರಚಿಸಲಾಗುವುದು ಎಂದು ಪ್ರಧಾನಿ ಪ್ರಕಟಿಸಿದರು.
 
ಕಾರ್ಯಪಡೆಯು ಕ್ರೀಡಾ ಸೌಲಭ್ಯಗಳಿಗೆ, ತರಬೇತಿಗೆ, ಆಯ್ಕೆ ವಿಧಾನಕ್ಕೆ ಮತ್ತು ಸಂಬಂಧಿಸಿದ ವಿಷಯಗಳಿಗೆ ಒಟ್ಟಾರೆ ಕಾರ್ಯತಂತ್ರವನ್ನು ಸಿದ್ಧಪಡಿಸಲಿದೆ. ಕಾರ್ಯಪಡೆಯಲ್ಲಿ ಆಂತರಿಕ ತಜ್ಞರು ಮತ್ತು ಹೊರಗಿನವರು ಇರುತ್ತಾರೆಂದು ಹೇಳಿಕೆ ತಿಳಿಸಿದೆ.
 
ಭಾರತ ರಿಯೊ ಒಲಿಂಪಿಕ್ಸ್‌ನಲ್ಲಿ ಕೇವಲ 2 ಪದಕಗಳನ್ನು ಗೆದ್ದ ಹಿನ್ನೆಲೆಯಲ್ಲಿ ಸೌಲಭ್ಯಗಳ ಕೊರತೆ ಮತ್ತು ಕ್ರೀಡಾಪಟುಗಳಿಗೆ ಬೆಂಬಲದ ಕೊರತೆಯ ಬಗ್ಗೆ ಗಮನಸೆಳೆದಿದ್ದರಿಂದ ಪ್ರಧಾನಿ ಮೋದಿ ಈ ಪ್ರಕಟಣೆ ಹೊರಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ