ಭಾರತದ ಹೆಮ್ಮೆಯ ಪುತ್ರಿಯ ಸಾಧನೆ: ರಿಯೋ ಒಲಿಂಪಿಕ್ಸ್‌ನಲ್ಲಿ ಸೆಮಿಗೆ ತಲುಪಿದ ಪಿ.ವಿ.ಸಿಂಧು

ಬುಧವಾರ, 17 ಆಗಸ್ಟ್ 2016 (14:14 IST)
ರಿಯೋ ಒಲಿಂಪಿಕ್ಸ್ 2016 ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ಹೆಮ್ಮೆಯ ಕುವರಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಜಯಗಳಿಸಿ ಸೆಮಿಫೈನಲ್ ತಲುಪಿ ಪದಕದ ಆಸೆಯನ್ನು ಜೀವಂತವಾಗಿರಿಸಿದ್ದಾರೆ. 
 
ಹೈದ್ರಾಬಾದ್ ಮೂಲದ 21 ವರ್ಷ ವಯಸ್ಸಿನ ಸಿಂಧು, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮ್ಮ ಎದುರಾಳಿ ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ್ತಿ, ಲಂಡನ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಚೀನಾದ ವಾಂಗ್ ಯಿಹಾನ್ ವಿರುದ್ಧ 22-20, 21-19 ಸೆಟ್‌ಗಳ ಅಂತರದಿಂದ ಜಯಗಳಿಸಿದ್ದಾರೆ. 
 
ಚೀನಾದ ಆಟಗಾರ್ತಿ ಅದ್ಭುತ ಆಟದ ಪ್ರದರ್ಶನ ನೀಡಿ 19-18 ಅಂಕಗಳಿಂದ ಮುನ್ನಡೆ ಸಾಧಿಸಿರುವಾಗ ಸಿಂಧು ಅತ್ಯುತ್ತಮ ಆಟದಿಂದಾಗಿ 19-19 ಅಂಕಗಳನ್ನು ಸಮಬಲವಾಗಿಸಿದರು.
 
ಮ್ಯಾಚ್ ಪಾಯಿಂಟ್ ಪಂದ್ಯದಲ್ಲಿ ಎದುರಾಳಿ ಯಿಹಾನ್ ವಿರುದ್ಧ ಶ್ರೇಷ್ಠ ಪ್ರದರ್ಶನ ನೀಡಿ ತಮ್ಮ ಬ್ಯಾಡ್ಮಿಂಟನ್ ಜೀವನದಲ್ಲಿ ಅದ್ಭುತ ಎನ್ನುವ ಪ್ರದರ್ಶನ ನೀಡಿದರು.
 
 ಕ್ವಾರ್ಟರ್‌ಪೈನಲ್‌ನಲ್ಲಿ ನೊಜೊಮಿ ಓಕುಹರಾ ಮತ್ತು ಅಕಾನೆ ಯಮಾಗುಚಿ ವಿರುದ್ಧದ ಪಂದ್ಯದಲ್ಲಿ ವಿಜೇತರಾಗುವವರೊಂದಿಗೆ ಸಿಂಧು ಸೆಮಿಫೈನಲ್ ಪಂದ್ಯದಲ್ಲಿ ಹಣಾಹಣಿ ನಡೆಸಲಿದ್ದಾರೆ. 
 
ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು ತಮ್ಮ ಎದುರಾಳಿ ತೈಪೆಯ ತ್ಜು ಯಿಂಗ್ ವಿರುದ್ಧ 21-13, 21-15 ಸೆಟ್‌ಗಳೊಂದಿಗೆ ಜಯಗಳಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದರು.
 
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ್ತಿ ಸ್ಪೇನ್ ದೇಶದ ಕರೋಲಿನಾ ಮರಿನ್ ತಮ್ಮ ಎದುರಾಳಿ ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ್ತಿ, ಲಂಡನ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಚೀನಾದ ಲಿ ಝುವೈರೈ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ