ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕ: ಅಗ್ರ ಐದನೇ ಸ್ಥಾನಕ್ಕೆ ಮರಳಿದ ಸೈನಾ ನೆಹ್ವಾಲ್

ಶುಕ್ರವಾರ, 31 ಅಕ್ಟೋಬರ್ 2014 (17:22 IST)
ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಬಿಡುಗಡೆಯಾದ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಮಹಿಳಾ ಸಿಂಗಲ್ಸ್ ಶ್ರೇಯಾಂಕದಲ್ಲಿ ಐದನೇ ಸ್ಥಾನವನ್ನು ಪಡೆದಿದ್ದಾರೆ. 

ಈ ತಿಂಗಳು ಡೆನ್ಮಾರ್ಕ್ ಮತ್ತು ಫ್ರೆಂಚ್ ಓಪನ್ ಪಂದ್ಯಾವಳಿಗಳ ಕ್ವಾರ್ಟರ್ ಫೈನಲ್‌ ಪಂದ್ಯಗಳಲ್ಲಿನ ಉತ್ತಮ ಪ್ರದರ್ಶನಗಳಿಂದಾಗಿ, ಅವರ ಶ್ರೇಯಾಂಕದಲ್ಲಿ ಸುಧಾರಣೆಯಾಗಿದೆ.
 
ಎರಡೂ ಸಂದರ್ಭದಲ್ಲಿ, ಅವರು ವಿಶ್ವದ 2ನೇ ಶ್ರೇಯಾಂಕಿತೆಯಾದ ಚೀನಾದ ಕ್ಸಿನ್ ವಾಂಗ್ ಅವರಿಂದ ಸೋತಿದ್ದರು. ಸೈನಾರ ಸಹವರ್ತಿ  ಪಿ.ವಿ. ಸಿಂಧು ಫ್ರೆಂಚ್ ಓಪನ್ ಮೊದಲ ಸುತ್ತಿನಲ್ಲಿ ಸೋತ ಹೊರತಾಗಿಯೂ 10ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
 
ಕಳೆದೆರಡು ಪಂದ್ಯಾವಳಿಗಳಲ್ಲಿ ತಕ್ಕಮಟ್ಟಿಗಿನ ಪ್ರದರ್ಶನ ನೀಡಿರುವ ಪಾರುಪಳ್ಳಿ ಕಶ್ಯಪ್ ನಾಲ್ಕು ಸ್ಥಾನ ಮೇಲಕ್ಕೇರಿ 17 ಸ್ಥಾನಕ್ಕೆ ಜಿಗಿದಿದ್ದಾರೆ. ಆ ಮೂಲಕ ಟಾಪ್- 20 ರಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. 
 
ಭಾರತೀಯ ಮಹಿಳಾ ಡಬಲ್ಸ್ ಜೋಡಿಯಾದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಸಹ ಮತ್ತೆ ಟಾಪ್ -20ರಲ್ಲಿ ಮರುಪ್ರವೇಶಿಸಿದ್ದಾರೆ. ಅವರು ನಂ 20 ನೇ ಶ್ರೇಯಾಂಕವನ್ನು ಪಡೆದಿದ್ದಾರೆ. ಪುರುಷರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗದಲ್ಲಿ ಯಾವೊಬ್ಬ ಭಾರತೀಯರು ಸ್ಥಾನ ಪಡೆಯಲು ಯಶಸ್ವಿಯಾಗಿಲ್ಲ.

ವೆಬ್ದುನಿಯಾವನ್ನು ಓದಿ