ಕಂಚಿನ ಪದಕ ನಿರಾಕರಿಸಿದ ಸರಿತಾದೇವಿಗೆ ನಿಷೇಧದ ಶಿಕ್ಷೆ

ಬುಧವಾರ, 22 ಅಕ್ಟೋಬರ್ 2014 (12:32 IST)
ಇಂಚಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ರೆಫರಿ ನಿರ್ಧಾರ ಪ್ರತಿಭಟಿಸಿ, ಕಂಚಿನ ಪದಕ ನಿರಾಕರಿಸಿದ್ದ ಬಾಕ್ಸರ್ ಸರಿತಾ ದೇವಿಗೆ ನಿಷೇಧದ ಶಿಕ್ಷೆ ವಿಧಿಸಲಾಗಿದೆ. ಅಂತಾರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟ ಈ ನಿಷೇಧ ಹೇರಿ ತೀರ್ಪು ನೀಡಿದೆ.

ತಮಗಾಗಿರುವ ಅನ್ಯಾಯವನ್ನು ಪ್ರಶ್ನಿಸಿದ ಸರಿತಾ ದೇವಿ ವೇದಿಕೆಯಲ್ಲಿ ಪದಕ ನೀಡುವಾಗ ಕಣ್ಣೀರು ಸುರಿಸಿದ್ದರು. ಕಂಚಿನ ಪದಕವನ್ನು ಕೊರಳಿಗೆ ಕೂಡ ಹಾಕಿಕೊಳ್ಳದೇ ಕೈಯಲ್ಲಿ ಹಿಡಿದಿದ್ದರು. ಅದಾದ ನಂತರ ಕಂಚಿನ ಪದಕವನ್ನು ವಾಪಸ್ ಮಾಡುವ ಮೂಲಕ ರೆಫರಿ ನಿರ್ಧಾರವನ್ನು ಪ್ರಶ್ನಿಸಿದ್ದರು. ಸರಿತಾದೇವಿ ಅವರ ಕೋಚ್ ಸಂಧುವನ್ನು ಕೂಡ ಕ್ರೀಡಾಕೂಟದಿಂದ ನಿಷೇಧಿಸಲಾಗಿದೆ. 
ಸರಿತಾದೇವಿಯ ನಡುವಳಿಕೆಯನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟ ಗಂಭೀರವಾಗಿ ಪರಿಗಣಿಸಿತ್ತು. ಏಕೆಂದರೆ ಸರಿತಾದೇವಿ ಪದಕ ನಿರಾಕರಿಸಿದ್ದರಿಂದ ತೀವ್ರ ವಿವಾದ ಹುಟ್ಟು ಹಾಕಿತ್ತು. ಸರಿತಾ ದೇವಿಗೆ ಅನ್ಯಾಯವಾಗಿದೆ ಎಂದು ಅನೇಕ ಭಾರತೀಯರು ಕೂಗೆಬ್ಬಿಸಿದ್ದರು. ಆದರೆ ರೆಫರಿಯ ತೀರ್ಮಾನವೇ ಅಂತಿಮವಾದ್ದರಿಂದ ಆ ನಿರ್ಧಾರವನ್ನು ಪ್ರಶ್ನಿಸಿ ಪ್ರತಿಭಟನೆ ಸೂಚಿಸಿದ ಸರಿತಾದೇವಿಯ ವರ್ತನೆಯನ್ನು ಖಂಡಿಸಿದ ಅಂತಾರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟ ಈಗ ನಿಷೇಧದ ಶಿಕ್ಷೆಯನ್ನು ವಿಧಿಸಿದೆ. 

ವೆಬ್ದುನಿಯಾವನ್ನು ಓದಿ