ಯುಎಸ್ ಓಪನ್: ಸೆರೆನಾಗೆ ಆಘಾತ, ಮಿಸ್ ಆಯ್ತು ಅಗ್ರ ಶ್ರೇಯಾಂಕ

ಶುಕ್ರವಾರ, 9 ಸೆಪ್ಟಂಬರ್ 2016 (15:00 IST)
ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯ ಸೆಮಿಫೈನ‌ಲ್‌ನಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸೋತು ನಿರ್ಗಮಿಸಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಅವರು 10ನೇ ಶ್ರೇಯಾಂಕಿತ ಆಟಗಾರ್ತಿ, ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್‌ಕೊವಾ ವಿರುದ್ಧ ಅಚ್ಚರಿಯ ಸೋಲನ್ನು ಕಂಡರು. 
ಈ ಸೋಲಿನಿಂದ ಅವರು 23 ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಮತ್ತು ಕಳೆದ 187 ವಾರಗಳಿಂದ ಕಾಪಾಡಿಕೊಂಡಿದ್ದ ಪ್ರಥಮ ಸ್ಥಾನದ ದಾಖಲೆ ಕಳೆದುಕೊಂಡರು. 
 
10ನೇ ಶ್ರೇಯಾಂಕಿತ ಆಟಗಾರ್ತಿ ಕರೋಲಿನಾ ಅವರಿಗೆ ಇದು ಪ್ರಥಮ ಗ್ರಾಂಡ್ ಸ್ಲಾಮ್ ಸೆಮಿ ಫೈನಲ್ ಆಗಿತ್ತು. ಎರಡನೆಯ ಸೆಟ್ ಟೈ-ಬ್ರೇಕರ್‌ನಲ್ಲಿ ಮ್ಯಾಚ್ ಪಾಯಿಂಟ್ ಮೇಲೆ ಸೆರೆನಾ ಡಬಲ್ ಫಾಲ್ಟ್ ದೋಷವೆಸಗಿದ್ದು ಕರೋಲಿನಾಗೆ ಅನುಕೂಲಕರವಾಗಿ ಪರಿಣಮಿಸಿತು. 6-2, 7-6 ನೇರ ಸೆಟ್‌ಗಳಿಂದ ಪ್ರಚಂಡ ಆಟಗಾರ್ತಿಗೆ ಸೋಲುಣಿಸಿದ ಅವರು ಫೈನಲ್ ತಲುಪಿದ್ದಾರೆ. 
 
ತಮ್ಮ ಸೋಲಿಗೆ ಪ್ರತಿಕ್ರಿಯಿಸಿರುವ ಸೆರೆನಾ ತಾವು ಪಂದ್ಯಾವಳಿಯ ಆರಂಭದಿಂದಲೇ ಎಡ ಮೊಣಕಾಲು ನೋವಿನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಸೋಲಿನಿಂದ ನಿರಾಶೆಯಾಗಿದ್ದರೂ, ಕರೋಲಿನಾ ಅರ್ಹ ಗೆಲುವನ್ನು ಸಂಪಾದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ