ಖೇಲ್ ರತ್ನಾ ಪ್ರಶಸ್ತಿಗೆ ಮುಂಚೂಣಿಯಲ್ಲಿ ಸಾನಿಯಾ ಮಿರ್ಜಾ ಹೆಸರು

ಶನಿವಾರ, 1 ಆಗಸ್ಟ್ 2015 (20:37 IST)
ನವದೆಹಲಿ: ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರು 2015ರ ರಾಜೀವ್ ಗಾಂಧಿ ಖೇಲ್ ರತ್ನಾ ಪ್ರಶಸ್ತಿಗೆ ಮುಂಚೂಣಿಯಲ್ಲಿದ್ದಾರೆ. ಕ್ರೀಡಾಸಚಿವಾಲಯ ಶನಿವಾರ ಸಾನಿಯಾ ಅವರನ್ನು ಈ ಗೌರವಕ್ಕೆ ಹೆಸರಿಸಿದೆ.  ಸಾನಿಯಾ ಕಳೆದ ವರ್ಷ 2014ರ  ಏಷ್ಯಾ ಕ್ರೀಡಾಕೂಟದಲ್ಲಿ ಸಾಕೇತ್ ಮೈನೇನಿ ಜತೆ ಚಿನ್ನದ ಪದಕ ವಿಜೇತರಾಗಿದ್ದರು. ಮಹಿಳೆಯರ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅಮೆರಿಕ ಓಪನ್‌ನಲ್ಲಿ ಬ್ರೂನೋ ಸೋರ್ಸ್ ಜೋಡಿಯಾಗಿ ಮಿಶ್ರಿತ ಡಬಲ್ಸ್ ಪ್ರಶಸ್ತಿ ವಿಜೇತರಾಗಿದ್ದರು.

ಇತ್ತೀಚೆಗೆ ವಿಶ್ವ ಡಬಲ್ಸ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದ್ದರು. ಮಾರ್ಟಿನಾ ಹಿಂಗಿಸ್ ಜೋಡಿಯಾಗಿ ವಿಂಬಲ್ಡನ್‌ನಲ್ಲಿ ಗೆದ್ದ ಗ್ರಾಂಡ್ ಸ್ಲಾಮ್ ಡಬಲ್ಸ್ ಪ್ರಶಸ್ತಿಯನ್ನು 2014-15ನೇ ಸಾಲಿನ ಖೇಲ್ ರತ್ನಾ ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
 
ಅಖಿಲ ಭಾರತ ಟೆನ್ನಿಸ್ ಒಕ್ಕೂಟವು ಸಾನಿಯಾ ಹೆಸರನ್ನು ಸೂಚಿಸುವುದಕ್ಕೆ ಗಡುವು ತಪ್ಪಿಹೋಗಿದ್ದರೂ ಕ್ರೀಡಾಸಚಿವಾಲಯವು ವಿವೇಚನಾ ಅಧಿಕಾರ ಬಳಸಿಕೊಂಡು ಸಾನಿಯಾ ಹೆಸರನ್ನು ಶಿಫಾರಸು ಮಾಡಿದೆ.
 
 ಈ ಪ್ರತಿಷ್ಠಿತ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ ಇತರೆ ಕ್ರೀಡಾಪಟುಗಳು ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ್, ಭಾರತದ ಹಾಕಿ ನಾಯಕ ಸರ್ದಾರ್ ಸಿಂಗ್, ಬಿಲ್ಲುಗಾರ ಅಭಿಷೇಕ್ ವರ್ಮಾ, ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಾಲ್ ಮತ್ತು ಪ್ಯಾರಾಲಿಂಪಿಯನ್ ದೇವೇಂದ್ರ ಜಜಾರಿಯಾ.

ವೆಬ್ದುನಿಯಾವನ್ನು ಓದಿ