ಟೇಲರ್ ಅಬ್ಬರ; ಆಸೀಸ್ ಮಣಿಸಿದ ಆಂಗ್ಲರು ಫೈನಲ್‌ಗೆ

ಶನಿವಾರ, 20 ಜೂನ್ 2009 (11:21 IST)
ಕ್ಲಾರೆ ಟೈಲರ್‌ರವರ ಅಜೇಯ 76ರ ನೆರವಿನಿಂದ ಇಂಗ್ಲೆಂಡ್ ತನ್ನ ಎದುರಾಳಿ ಆಸ್ಟ್ರೇಲಿಯಾವನ್ನು ಎಂಟು ವಿಕೆಟ್‌ಗಳಿಂದ ಮಣಿಸಿದ್ದು, ಮಹಿಳೆಯವರ ಟ್ವೆಂಟಿ-20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ.

ಭಾರತವನ್ನು ಮಣಿಸಿ ಈಗಾಗಲೇ ಫೈನಲ್ ತಲುಪಿರುವ ನ್ಯೂಜಿಲೆಂಡ್ ತಂಡವನ್ನು ಭಾನುವಾರ ಲಾರ್ಡ್ಸ್‌ನಲ್ಲಿ ಆಂಗ್ಲರು ಮುಖಾಮುಖಿಯಾಗಲಿದ್ದಾರೆ.

ವಿಶ್ವ ಚಾಂಪಿಯನ್ ಇಂಗ್ಲೆಂಡ್ 164ರ ಗೆಲುವಿನ ಗುರಿಯೊಂದಿಗೆ ಹೊರಟು ಕೇವಲ ಎರಡು ವಿಕೆಟ್ ನಷ್ಟಕ್ಕೆ 165 ರನ್ ಮಾಡುವ ಮೂಲಕ ಈ ಟೂರ್ನಮೆಂಟ್‌ನ ಅತ್ಯಧಿಕ ಮೊತ್ತ ದಾಖಲಿಸಿದ್ದಲ್ಲದೆ ಗೆಲುವಿನ ನಗೆ ಬೀರಿತು.

ಟೇಲರ್ (76*) ಮತ್ತು ಬೇತ್ ಮೋರ್ಗನ್ (46*)ರಿಬ್ಬರು 122 ರನ್ನುಗಳ ಅಮೋಘ ಪಾಲುದಾರಿಕೆ ನೀಡುವ ಮೂಲಕ ಈ ಪಂದ್ಯವನ್ನು ಇನ್ನೂ ಮೂರು ಎಸೆತಗಳಿರುವಾಗಲೇ ಇಂಗ್ಲೆಂಡ್ ಗೆದ್ದುಕೊಂಡಿದೆ.

ಈ ಹಿಂದಿನ ಮೂರು ಏಕದಿನ ಪಂದ್ಯಗಳನ್ನು ಆಸ್ಟ್ರೇಲಿಯಾದೆದುರು ಸೋತಿದ್ದ ಇಂಗ್ಲೆಂಡ್ ಈ ಚುಟುಕು ಪ್ರಕಾರದ ಪಂದ್ಯದಲ್ಲೂ 43ಕ್ಕೆ ಎರಡು ವಿಕೆಟ್ ಕಳೆದುಕೊಂಡಿತ್ತು. ಸರಾಹ್ ಟೇಲರ್ (6) ಮತ್ತು ಚಾರ್ಲೊಟ್ಟೆ ಎಡ್ವರ್ಡ್ಸ್ (25) ಏಳು ಓವರುಗಳಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದಿದ್ದರು.

ಆದರೆ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿ ಹೋಯಿತು. ಕ್ಲಾರೆ ಟೇಲರ್ ತನ್ನ 76 ರನ್ನುಗಳ ಮ್ಯಾರಥಾನ್‌ನಲ್ಲಿ 53 ಎಸೆತಗಳನ್ನೆದುರಿಸಿದ್ದರು. ಎಂಟು ಎಸೆತಗಳನ್ನು ಬೌಂಡರಿ ಗೆರೆ ಮುಟ್ಟಿಸಿದ್ದು ಪ್ರೇಕ್ಷಕರ ಕರಾಡತನಕ್ಕೆ ಕಾರಣವಾಗಿತ್ತು.

ಮೋರ್ಗನ್ 34 ಎಸೆತಗಳಿಂದ ಐದು ಬೌಂಡರಿಯೊಂದಿಗೆ 46 ರನ್ ಗಳಿಸಿದ್ದರು. ಒಟ್ಟಾರೆ ಇಂಗ್ಲೆಂಡ್ 19.3 ಓವರುಗಳಲ್ಲಿ 165 ರನ್ ಗಳಿಸುವ ಮೂಲಕ ಫೈನಲ್ ಪ್ರವೇಶಿಸಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಅಗ್ರ ಕ್ರಮಾಂಕದ ನಾಲ್ವರ ಅಮೋಘ ಬ್ಯಾಟಿಂಗ್ ಮೂಲಕ ಬೃಹತ್ ಮೊತ್ತವನ್ನೇ ಪೇರಿಸಿ ಆಂಗ್ಲರ ಪಾಳಯದಲ್ಲಿ ದಿಗಿಲು ಹುಟ್ಟಿಸಿತ್ತು.

ಶೆಲ್ಲಿ ನಿತ್ಸಾಚ್ಕೆ (37), ಲೀಹಾ ಪೌಲ್ಟನ್ (39), ಲೀಸಾ ಸ್ತಾಲೇಕರ್ (28) ಮತ್ತು ಕರೇನ್ ರೋಲ್ಟನ್ (38) ಅದ್ಭುತ ಪ್ರದರ್ಶನ ನೀಡಿದ್ದರು. ಈ ನಾಲ್ವರು 19 ಎಸೆತಗಳನ್ನು ಬೌಂಡರಿಗಟ್ಟಿದ್ದರು.

ಅಲೆಕ್ಸ್ ಬ್ಲಾಕ್‌ವೆಲ್ (5) ಬೇಗನೆ ವಿಕೆಟ್ ಕಳೆದುಕೊಂಡರೆ ಲಾರೆನ್ ಎಬ್ಸಾರಿ (8) ಮತ್ತು ರೆನೆ ಪಾರೆಲ್(1)ರಿಬ್ಬರೂ ಅಜೇಯರಾಗುಳಿದರು. ಒಟ್ಟಾರೆ ಐದು ವಿಕೆಟ್ ಕಳೆದುಕೊಂಡಿದ್ದ ಆಸೀಸ್ 20 ಓವರುಗಳಲ್ಲಿ 163 ರನ್ ದಾಖಲಿಸಿತ್ತು.

ವೆಬ್ದುನಿಯಾವನ್ನು ಓದಿ