ದಿಲ್‌ಶಾನ್ ಅಪೂರ್ವ ಮಾರ್ಗದರ್ಶಕ: ಸಂಗಕ್ಕರ ಶ್ಲಾಘನೆ

ಶನಿವಾರ, 20 ಜೂನ್ 2009 (11:52 IST)
ವೆಸ್ಟ್‌ಇಂಡೀಸ್ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಅಜೇಯ 96 ರನ್ ಸಿಡಿಸಿದ ತಿಲಕರತ್ನೆ ದಿಲ್‌ಶಾನ್ 'ಅಪೂರ್ವ ಮಾರ್ಗದರ್ಶಕ' ಎಂದು ಶ್ರೀಲಂಕಾ ಕಪ್ತಾನ ಕುಮಾರ ಸಂಗಕ್ಕರ ಬಣ್ಣಿಸಿದ್ದಾರೆ.

ವಿಂಡೀಸ್ ವಿರುದ್ಧ 57 ರನ್‌ಗಳ ಭಾರೀ ಅಂತರದ ಜಯ ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿರುವ ಲಂಕಾ ಭಾನುವಾರ ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.

"ದಿಲ್‌ಶಾನ್ ಅಮೋಘ ಆಟದೆದುರು ನಾನು ಓಡಿ ಹೋಗಬೇಕಾಯಿತು. ಟ್ವೆಂಟಿ-20ಯಲ್ಲಿ ಅವರೊಬ್ಬ ಮಾರ್ಗದರ್ಶಕ" ಎಂದು ಸಂಗಕ್ಕರ ಪಂದ್ಯದ ನಂತರ ಮೆಚ್ಚುಗೆ ವ್ಯಕ್ತಪಡಿಸಿದರು.

"ಅವರು ತನ್ನ ಪಾತ್ರವನ್ನು ಅರ್ಥೈಸಿಕೊಂಡಿರುವುದು ಖುಷಿ ತಂದಿದೆ. ಅಲ್ಲದೆ ಅವರೊಬ್ಬ ತೀವ್ರ ಜವಾಬ್ದಾರಿಯನ್ನರಿತು ಮುನ್ನಡೆಯುವ ದಾಂಡಿಗ. ಜತೆಗೆ ಪ್ರಬುದ್ಧ ಮನಸ್ಸಿನವರು ಕೂಡ ಹೌದು. ಅವರೆಷ್ಟು ಶ್ರೇಷ್ಠರು ಎಂಬುದನ್ನು ಅವರು ಕೊನೆಗೂ ಕಂಡುಕೊಂಡಿದ್ದಾರೆ" ಎಂದರು.

ದಿಲ್‌ಶಾನ್ ಕೇಂದ್ರ ಬಿಂದುವಾಗಿದ್ದ ಈ ಪಂದ್ಯದಲ್ಲಿ ಶ್ರೀಲಂಕಾ ಐದು ವಿಕೆಟ್ ನಷ್ಟಕ್ಕೆ 158 ರನ್ ಮಾಡಿತ್ತು. ಅವರು 57 ಎಸೆತಗಳಿಂದ ಎರಡು ಸಿಕ್ಸ್ ಹಾಗೂ 12 ಬೌಂಡರಿಗಳನ್ನೆತ್ತಿದ್ದರು. ಅಲ್ಲದೆ ಅಂತಾರಾಷ್ಟ್ರೀಯ ಟ್ವೆಂಟಿ-20ಯಲ್ಲಿ ಅವರು ದಾಖಲಿಸಿರುವ ನಿನ್ನೆಯ ಮೊತ್ತವು ಅತಿ ಗರಿಷ್ಠ ಸಾಲಿನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ಉಳಿದಂತೆ ಈ ಪಂದ್ಯದಲ್ಲಿ ಎರಡಂಕಿ ತಲುಪಿದವರೆಂದರೆ ಸನತ್ ಜಯಸೂರ್ಯ (24), ಚಾಮರ ಸಿಲ್ವಾ (11) ಮತ್ತು ಅಂಜೆಲೋ ಮ್ಯಾಥ್ಯೂಸ್ (12*) ಮಾತ್ರ.

ಅಂಜೆಲೋ ಮ್ಯಾಥ್ಯೂಸ್ ಆರಂಭಿಕ ಓವರಿನಲ್ಲೇ ಮೂರು ಪ್ರಮುಖ ವಿಕೆಟುಗಳನ್ನು ಪಡೆದುಕೊಂಡ ನಂತರ ವೆಸ್ಟ್‌ಇಂಡೀಸ್ ಚೇತರಿಸಿಕೊಳ್ಳಲೇ ಇಲ್ಲ. ಆದರೂ ಅತ್ತ ಅಜೇಯ ಪ್ರದರ್ಶನ ನೀಡಿದ ಕ್ರಿಸ್ ಗೇಲ್ (63*) ನೆರವಿನಿಂದ ವಿಂಡೀಸ್ ನೂರರ ಗಡಿ ದಾಟುವಲ್ಲಿ ಯಶಸ್ವಿಯಾಗಿತ್ತು.

"ಇದು ಮ್ಯಾಥ್ಯೂಸ್‌ರವರ ಚೊಚ್ಚಲ ಅಂತಾರಾಷ್ಟ್ರೀಯ ಪ್ರವಾಸ. ಆರಂಭಿಕ ಓವರಿನಲ್ಲಿ ಮೂರು ವಿಕೆಟ್ ಪಡೆದ ನಂತರ ಅದಕ್ಕಿಂತ ಹೆಚ್ಚಿನದ್ದನ್ನು ಬಯಸಲಾಗದು. ಅಗ್ರ ಕ್ರಮಾಂಕದ ಮೂವರನ್ನು ಬೇಗನೆ ಪಡೆದುಕೊಂಡಿರುವುದು ನಮಗೆ ತುಂಬಾ ಸಹಕಾರಿಯಾಯಿತು. ನಮ್ಮಲ್ಲಿ ಶ್ರೇಷ್ಠ ಬೌಲಿಂಗ್ ಪಡೆಯಿದೆ" ಎಂದು ಬೌಲಿಂಗ್ ಬಗ್ಗೆಯೂ ಸಂಗಕ್ಕರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದೇ ಆತ್ಮವಿಶ್ವಾಸವನ್ನು ನಾವು ಪಾಕಿಸ್ತಾನ ವಿರುದ್ಧದ ಫೈನಲ್‌ವರೆಗೂ ತೆಗೆದುಕೊಂಡು ಹೋಗಲಿದ್ದೇವೆ. ನಾವಂದುಕೊಂಡಂತೆ ನಡೆಯುವಂತಾಗಲು ಹೆಚ್ಚಿನ ಗಮನ ಹರಿಸುತ್ತೇವೆ. ಅಲ್ಲದೆ ಜವಾಬ್ದಾರಿಯುತರಾಗಿ ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುತ್ತೇವೆ ಎಂದೂ ಅವರು ತಿಳಿಸಿದ್ದಾರೆ.

ತಾನೂ ಅಂತಾರಾಷ್ಟ್ರೀಯ ವಲಯದಲ್ಲಿ ಯಾವತ್ತೂ ತಿಳಿದುಕೊಳ್ಳುವವನು ಎಂದಿರುವ ಪಂದ್ಯ ಪುರುಷೋತ್ತಮ ದಿಲ್‌ಶಾನ್, "ನಾನು ಬಯಸಿದಂತೆ ಆರಂಭ ನನಗೆ ದೊರಕಿತು. ನಾನು ಕಳೆದ ಆರು ತಿಂಗಳಿನಿಂದ ಐಪಿಎಲ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಲಯ ಹೊಂದಿದ್ದೇನೆ" ಎಂದರು.

ಕೇವಲ 17.4 ಓವರುಗಳಲ್ಲಿ 101ಕ್ಕೆ ಸರ್ವಪತನ ಕಾಣುವ ಮೂಲಕ ಸೋಲುಂಡ ತಂಡದ ನಾಯಕ ಕ್ರಿಸ್ ಗೇಲ್ ನಿರಾಸೆ ವ್ಯಕ್ತಪಡಿಸಿದ್ದಾರೆ.

"ನನಗೆ ತೀವ್ರ ನಿರಾಸೆಯಾಗಿದೆ. ನಮ್ಮ ಸಾಮರ್ಥ್ಯ ಬ್ಯಾಟಿಂಗ್ ಅಂದುಕೊಂಡಿದ್ದೆ. ದಿಲ್‌ಶಾನ್ ಆಟವನ್ನು ನಮ್ಮಿಂದ ದೂರ ತೆಗೆದುಕೊಂಡು ಹೋದರು. ನಂತರ ನಾವು ಆರಂಭದಲ್ಲೇ ಆಘಾತ ಅನುಭವಿಸಿದೆವು. ನಂತರ ಕೂಡ ಸ್ಕೋರ್ ಬೋರ್ಡ್‌ನಲ್ಲಿ ರನ್ ಮೂಡಿಸಲು ಸಾಧ್ಯವಾಗಲಿಲ್ಲ. ಮುಂದೆ ಅತ್ಯುತ್ತಮ ತಂಡದೊಂದಿಗೆ ವಾಪಸು ಬರುತ್ತೇವೆ. ಇದರಿಂದ ಹಲವು ವಿಚಾರಗಳನ್ನು ಕಲಿಯಲಿದ್ದೇವೆ" ಎಂದರು.

ವೆಬ್ದುನಿಯಾವನ್ನು ಓದಿ