ವಿಶ್ವಕಪ್ ವಿಜಯವನ್ನು ದೇಶಕ್ಕೆ ಸಮರ್ಪಿಸಿದ ಯೂನಿಸ್ ಖಾನ್

ಸೋಮವಾರ, 22 ಜೂನ್ 2009 (10:37 IST)
ಟ್ವೆಂಟಿ-20 ವಿಶ್ವಕಪ್ ಅಮೋಘ ವಿಜಯವನ್ನು ಭಯೋತ್ಪಾದನೆಯಿಂದ ನರಳುತ್ತಿರುವ ತನ್ನ ರಾಷ್ಟ್ರಕ್ಕೆ ಸಮರ್ಪಿಸಿರುವ ಪಾಕಿಸ್ತಾನ ಕಪ್ತಾನ ಯೂನಿಸ್ ಖಾನ್, ತನ್ನ ನಾಯಕತ್ವದಿಂದಾದ ಸಾಧನೆಯ ಬಗ್ಗೆ ತೃಪ್ತಗೊಂಡಿದ್ದಾರೆ.

"ಈ ಯಶಸ್ಸು ಸರಿಯಾದ ಸಮಯಕ್ಕೇ ನಮಗೆ ಒಲಿದಿದೆ. ಇದು ಪಾಕಿಸ್ತಾನದ ಜನತೆಗೆ ನಮ್ಮ ಕೊಡುಗೆ" ಎಂದು ಶ್ರೀಲಂಕಾವನ್ನು ಎಂಟು ವಿಕೆಟ್‌ಗಳಿಂದ ಮಣಿಸಿದ ನಂತರ ಭಾವುಕರಾದ ಯೂನಿಸ್ ತಿಳಿಸಿದರು.
pti

ತನ್ನ ಜೀವನದಲ್ಲಿ ಇದೊಂದು ಅಪೂರ್ವ ಕ್ಷಣವೆಂದು ಬಣ್ಣಿಸಿದ ಅವರು, "ಇಮ್ರಾನ್ ಖಾನ್ ನಂತರ ಪಾಕಿಸ್ತಾನದ ಯಾವುದೇ ಕಪ್ತಾನ ವಿಶ್ವಕಪ್ ಚಾಂಪಿಯನ್‌ಶಿಪ್ ಗೆದ್ದಿರಲಿಲ್ಲ. ಅದನ್ನು ನಾನು ಮಾಡಿರುವುದಕ್ಕೆ ಸಂತಸವಾಗುತ್ತಿದೆ. ನನ್ನ ಕ್ರೀಡಾಜೀವನ ಅಂತ್ಯಗೊಂಡ ದಿನ ಹಿಂತಿರುಗುಗಿ ನೋಡಿದಾಗ ನನಗೆ ಸಂತೃಪ್ತ ಭಾವನೆ ಬರಲಿದೆ" ಎಂದರು.

ಭದ್ರತಾ ಸಮಸ್ಯೆಗಳಿಂದಾಗಿ ತಾಯ್ನೆಲದಲ್ಲಿ ಹೆಚ್ಚಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ವಂಚಿತವಾಗಿದ್ದ ಪಾಕಿಸ್ತಾನವು ಭಾನುವಾರದ ಪಂದ್ಯದಲ್ಲಿ ತನ್ನ ಶಕ್ತಿ ಪ್ರದರ್ಶಿಸಿದ್ದು ಎಂಟು ವಿಕೆಟ್‌ಗಳ ಅಮೋಘ ಜಯ ಸಾಧಿಸಿತ್ತು.

ಹಲವು ಬಾರಿ ಕಪ್ತಾನಗಿರಿಯನ್ನು ನಿರಾಕರಿಸಿದ್ದ ಯೂನಿಸ್ ಖಾನ್ ಇದೀಗ ತನ್ನನ್ನು ತಾನು ಶ್ರೇಷ್ಠ ನಾಯಕ ಎಂದು ಘೋಷಿಸಿಕೊಳ್ಳಲು ಸಿದ್ಧರಿಲ್ಲ. ಆದರೆ ತಾನು ಕೊನೆಯವರೆಗೂ ಹೋರಾಟ ನಡೆಸುವುದರಿಂದ ಹೊರಗುಳಿಯಲಾರೆ ಎಂದು ಸೂಚ್ಯವಾಗಿ ಪ್ರಕಟಿಸಿದರು.

"ಅದೊಂದು ಸಮಯದಲ್ಲಿ ಪ್ರತಿಯೊಬ್ಬರೂ ಪಾಕಿಸ್ತಾನದ ನಾಯಕನಾಗುವಂತೆ ನನ್ನನ್ನು ಒತ್ತಾಯಿಸುತ್ತಿದ್ದರು. ನಾನು ಶ್ರೇಷ್ಠ ನಾಯಕನಲ್ಲವೆಂಬುದು ನನಗೆ ಗೊತ್ತು. ಅದೇ ಹೊತ್ತಿಗೆ ನಾನು ಕೆಚ್ಚೆದೆಯವನು ಎಂಬುದೂ ಗೊತ್ತು. ನಾಯಕನಾದವನು ನಿರ್ಭಯನಾಗಿರುವುದು ಅವಶ್ಯಕ" ಎಂದು ಅನುಭವಿ ಬ್ಯಾಟ್ಸ್‌ಮನ್ ವಿವರಿಸಿದ್ದಾರೆ.

ಈ ಟೂರ್ನಮೆಂಟ್‌ನಲ್ಲಿ ಶಾಹಿದ್ ಆಫ್ರಿದಿಯವರನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿಸಿದ್ದು ಸಾಕಷ್ಟು ಪ್ರಯೋಜನಕ್ಕೆ ಬಂತು ಎಂದು ಯೂನಿಸ್ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

"ಅವರು ಟ್ವೆಂಟಿ-20 ಮತ್ತು ಏಕದಿನಗಳಲ್ಲಿ ಮೂರನೇ ಕ್ರಮಾಂಕಕ್ಕೆ ಹೇಳಿ ಮಾಡಿಸಿದ ದಾಂಡಿಗ ಎಂಬುದು ಯಾವತ್ತೂ ನನ್ನ ಭಾವನೆಯಾಗಿತ್ತು. ಕಳೆದೆರಡು ಪಂದ್ಯಗಳಲ್ಲಿ ಅವರ ಪ್ರದರ್ಶನ ಅಮೋಘ" ಎಂದು ಸಹ ಆಟಗಾರನ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

1992ರಲ್ಲಿನ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ ಗೆದ್ದು ಕೊಂಡಿದ್ದ ಇಮ್ರಾನ್ ಖಾನ್ ಬಳಗದ ನಂತರ ಪಾಕಿಸ್ತಾನ ಯಾವುದೇ ವಿಶ್ವಕಪ್ ಗೆದ್ದುಕೊಂಡಿರಲಿಲ್ಲ.

1999ರಲ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾಗೂ 2007ರ ಉದ್ಘಾಟನಾ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಫೈನಲ್‌ನಲ್ಲಿ ಸೋಲುಂಡ ಪಾಕಿಸ್ತಾನ ಗಾಯಗೊಂಡ ಹುಲಿಯಂತಾಗಿತ್ತು.

ಸಂಭ್ರಮದ ಹೊತ್ತಿನಲ್ಲೂ ಪಾಕಿಸ್ತಾನದ ಮಾಜಿ ಕೋಚ್ ದಿವಂಗತ ಬಾಬ್ ವೂಲ್ಮರ್‌ರನ್ನು ಸ್ಮರಿಸಲು ಮರೆಯದ ಯೂನಿಸ್, ಫೈನಲ್ ಪಂದ್ಯವನ್ನು ಅವರಿಗೆ ಸಮರ್ಪಿಸಿದರು.

"ಫೈನಲ್ ಪಂದ್ಯದ ಕೀರ್ತಿಯು ಬಾಬ್ ವೂಲ್ಮರ್‌ರಿಗೆ ಸಲ್ಲಬೇಕು. 2005ರಿಂದ ಅವರು ನಮ್ಮೊಂದಿಗಿದ್ದರು. ಅದರಲ್ಲೂ ನನಗಂತೂ ಹೆಚ್ಚಿನ ಸಹಕಾರಿಯಾಗಿದ್ದರು. ಅವರು ನಮಗೆ ತಂದೆಯಿದ್ದಂತೆ" ಎಂದರು.

2007ರಲ್ಲಿನ ವೆಸ್ಟ್‌ಇಂಡೀಸ್ ವಿಶ್ವಕಪ್ ಸಂದರ್ಭದಲ್ಲಿ ಪಾಕಿಸ್ತಾನವು ಐರ್ಲೆಂಡ್ ವಿರುದ್ಧ ಸೋಲುಂಡು ನಿರ್ಗಮಿಸಿದ ನಂತರ ವೂಲ್ಮರ್ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದರು.