ಐಸಿಸಿ ಟಿ -20 ವಿಶ್ವಕಪ್ ಲಾಂಛನ ಬಿಡುಗಡೆ

ಬುಧವಾರ, 9 ಡಿಸೆಂಬರ್ 2015 (09:04 IST)
2016 ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಐಸಿಸಿ ಟಿ -೨೦ ವಿಶ್ವಕಪ್ ಲಾಂಛನವನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಂಗಳವಾರ ಬಿಡುಗಡೆ ಮಾಡಿದೆ.

ಟಿ20 ಟೂರ್ನಿಯ ಶ್ರೇಷ್ಠ ಟೂರ್ನಿ ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿದ್ದು, ವಿಶ್ವಕಪ್ ಬಗ್ಗೆ ಉತ್ಸುಕವಾಗಿದ್ದೇವೆ ಎಂದು ಐಸಿಸಿ ಟ್ವೀಟರ್‌ನಲ್ಲಿ ತಿಳಿಸಿದೆ.

ಬೆಂಗಳೂರು, ಚೆನೈ, ಧರ್ಮಶಾಲಾ, ಮೊಹಾಲಿ, ಮುಂಬೈ, ನಾಗ್ಪುರ ಹಾಗೂ ದೆಹಲಿಯಲ್ಲಿ ಸರಣಿ ಪಂದ್ಯ ನಡೆಯಲಿವೆ. ಇಪ್ಪತ್ತು ವರ್ಷಗಳ ನಂತರ ಕೋಲ್ಕತಾದ ಈಡನ್ ಗಾರ್ಡನ್‌ನಲ್ಲಿ ಫೈ ನಲ್ ಪಂದ್ಯ  ನಡೆಯಲಿದೆ. ಹದಿನಾರು ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದು ಪ್ರಶಸ್ತಿಗಾಗಿ ಪರಸ್ಪರ ಸೆಣಸಾಡಲಿವೆ. ಚೆನ್ನೈ ಕ್ರೀಡಾಂಗಣದ ಎಲ್ಲ ಸ್ಟ್ಯಾಂಡ್​ಗಳು ಲಭ್ಯವಿದ್ದಲ್ಲಿ ಮಾತ್ರವೇ ಅಲ್ಲಿ ಪಂದ್ಯ ನಡೆಸಲಾಗುವುದು ಎಂದು ಐಸಿಸಿ ಹೇಳಿದೆ.

ಹತ್ತು ಸದಸ್ಯ ರಾಷ್ಟ್ರಗಳು ಪಂದ್ಯಾವಳಿಗೆ ನೇರವಾಗಿ ಆಯ್ಕೆಯಾದರೆ, ಉಳಿದ ಆರು ತಂಡಗಳನ್ನು ಅರ್ಹತಾ ಸುತ್ತಿನಲ್ಲಿ ಆಯ್ಕೆ ಮಾಡಲಾಗುತ್ತದೆ. ಈ ಅರ್ಹತಾ ಸುತ್ತಿನ ಪಂದ್ಯಗಳನ್ನು ಐರ್ಲೆಂಡ್ ಹಾಗೂ ಸ್ಕಾಟ್ಲೆಂಡ್‌ನಲ್ಲಿ ನಡೆಸಲಾಗುತ್ತದೆ.

 ಕಳೆದ ವರ್ಷ ಬಾಂಗ್ಲಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಶ್ರೀಲಂಕಾ ಚಾಂಪಿಯನ್ ಆಗಿತ್ತು. 2007ರಲ್ಲಿ ನಡೆದ ಚೊಚ್ಚಲ ಟಿ -20 ವಿಶ್ವಕಪ್‌ನ್ನು ಭಾರತ ತನ್ನದಾಗಿಸಿಕೊಂಡಿತ್ತು.

ವೆಬ್ದುನಿಯಾವನ್ನು ಓದಿ