ವಿಶ್ವಕಪ್ ಟಿ20: ಭಾರತಕ್ಕೆ 127 ರನ್‌ಗಳ ಸವಾಲ್ ಒಡ್ಡಿದ ನ್ಯೂಜಿಲೆಂಡ್

ಮಂಗಳವಾರ, 15 ಮಾರ್ಚ್ 2016 (21:35 IST)
ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್, ಆರಂಭಿಕ ವಿಕೆಟ್‌ಗಳ ಕುಸಿತದ ಮಧ್ಯೆಯೂ ಭಾರತಕ್ಕೆ 127 ರನ್‌ಗಳ ಸವಾಲನ್ನು ನೀಡಿತು.
ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಳ್ಳಲು ನಿರ್ಧರಿಸಿದರು. ನ್ಯೂಜಿಲೆಂಡ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 126 ರನ್‌ಗಳನ್ನು ಗಳಿಸಿ, ಭಾರತಕ್ಕೆ 127 ರನ್‌ಗಳ ಸವಾಲ್ ಒಡ್ಡಿತು.   
 
ಮಾರ್ಟಿನ್‌ ಗಪ್ಟಿಲ್ ಎರಡು ಎಸೆತಗಳನ್ನು ಎದುರಿಸಿ ಒಂದು ಸಿಕ್ಸರ್ ನೆರವಿನಿಂದ 6 ರನ್ ಗಳಿಸಲು ಮಾತ್ರ ಶಕ್ತರಾಗಿ ರವಿಚಂದ್ರನ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಯೂ ಬಲೆಗೆ ಬಿದ್ದು ಪೆವಿಲಿಯನ್‌ಗೆ ಮರಳಿದರು. ಕೇನ್ ವಿಲಿಯಮ್ಸನ್ 16 ಎಸೆತಗಳನ್ನು ಎದುರಿಸಿ 8 ರನ್‌ಗಳಿಸಿ, ಸುರೇಶ್ ರೈನಾ ಬೌಲಿಂಗ್‌ನಲ್ಲಿ ಸ್ಟಂಪ್ ಬಲೆಗೆ ಸಿಲುಕಿ ಔಟಾದರು.
 
ಕೊಲಿನ್ ಮುನ್ರೋ 6 ಎಸೆತಗಳನ್ನು ಎದುರಿಸಿ ಒಂದು ಸಿಕ್ಸರ್‌ ನೆರವಿನಿಂದ 7 ರನ್‌ಗಳಿಸಿ, ಆಶೀಶ್ ನೆಹ್ರಾ ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯಾಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಕೊರೆ ಅಂಡರ್ಸನ್ 42 ಎಸೆತಗಳನ್ನು ಎದುರಿಸಿ ಮೂರು ಬೌಂಡರಿಗಳನ್ನು ಬಾರಿಸಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ, 34 ರನ್‌ಗಳಿಸಿದ್ದಾಗಜಸ್ಟ್ರಿತ್ ಬುಮ್ರಾಹ್ ಬೌಲಿಂಗ್‌ನಲ್ಲಿ ಔಟಾದರು.
 
ರಾಸ್ ಟೇಲರ್ 14 ಎಸೆತಗಳಲ್ಲಿ ಒಂದು ಬೌಂಡರಿ ಬಾರಿಸಿ 10 ರನ್‌ಗಳಿಸಿ, ತಂಡಕ್ಕೆ ಹೆಚ್ಚಿನ ಸ್ಕೋರ ನೀಡುವ ನಿರೀಕ್ಷೆಯಲ್ಲಿರುವಾಗಲೇ ರನೌಟ್‌ ಆಗಿ ಪೆವಿಲಿಯನ್‌ಗೆ ವಾಪಸಾದರು.ಮಿಚೆಲ್ ಸಾಂಟ್‌ನರ್ 17 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 18 ರನ್‌ಗಳಿಸಿ ಜಡೇಜಾ ಬೌಲಿಂಗ್‌ನಲ್ಲಿ ಧೋನಿಗೆ ಕ್ಯಾಚ್ ನೀಡಿ ಓಟಾದರು.
 
ಗ್ರಾಂಟ್ ಈಲಿಯಟ್ 12 ಎಸೆತಗಳಲ್ಲಿ 9 ರನ್‌ಗಳಿಸಿ ರನೌಟ್ ಆದರು. ತಂಡ ರನ್‌ಗಳ ಬರದಿಂದ ಬಳಲುತ್ತಿದ್ದಾಗ ಬ್ಯಾಟ್ಸ್‌ಮೆನ್ ಲೂಕ್ ರೊಂಚಿ 11 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 21 ರನ್ ಗಳಿಸಿ ಅಜೇಯರಾಗಿ ಉಳಿದರು.  
 
ನಥಾನ್ ಮೆಕಲಂ ಯಾವುದೇ ಎಸೆತಗಳನ್ನು ಎದುರಿಸದೇ ಅಜೇಯರಾಗಿ ಉಳಿದರು. ನ್ಯೂಜಿಲೆಂಡ್ ತಂಡ ಎದುರಾಳಿ ಭಾರತ ತಂಡಕ್ಕೆ 127 ರನ್‌ಗಳ ಸವಾಲನ್ನು ಮಾತ್ರ ಒಡ್ಡುವಲ್ಲಿ ಶಕ್ತವಾಯಿತು.   
 
ಭಾರತ ತಂಡದ ಪರವಾಗಿ ಅಶ್ವಿನ್, ನೆಹ್ರಾ, ಬುಮ್ರಾಹ್, ರೈನಾ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಕಬಳಿಸಿದರು.
 
ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟಿ-20 ಮೊದಲ ಪಂದ್ಯಕ್ಕೆ 43 ಸಾವಿರ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ನೆರೆದು ಉಭಯ ತಂಡಗಳನ್ನು ಪ್ರೋತ್ಸಾಹಿಸಿದರು.  
 

ವೆಬ್ದುನಿಯಾವನ್ನು ಓದಿ