ಅಭಿಮಾನಿಗಳಿಗೆ ಆಫ್ರಿದಿ ಸೂಪರ್‌ಸ್ಟಾರ್, ವೀರಯೋಧ

ಸೋಮವಾರ, 22 ಜೂನ್ 2009 (10:21 IST)
ಶ್ರೀಲಂಕಾ ವಿರುದ್ಧ ನಡೆದ ಟ್ವೆಂಟಿ-20 ವಿಶ್ವಕಪ್ ಫೈನಲ್‌ ಗೆಲುವಿನಲ್ಲಿ ಅಮೋಘ ಪ್ರದರ್ಶನ ನೀಡಿದ ಪಾಕಿಸ್ತಾನದ ಸೂಪರ್‌ಸ್ಟಾರ್ ಶಾಹಿದ್ ಆಫ್ರಿದಿ ಈಗ 'ವೀರಯೋಧ'ನೆಂದು ಬಣ್ಣಿಸಲ್ಪಡುತ್ತಿದ್ದಾರೆ.

ಈ ಆಲ್-ರೌಂಡರ್ ಕೇವಲ 40 ಎಸೆತಗಳಿಂದ ಅಜೇಯ 54 ರನ್ ಸಿಡಿಸುವ ಮೂಲಕ ಸತತ ಎರಡನೇ ಅರ್ಧಶತಕ ದಾಖಲಿಸಿದ್ದಲ್ಲದೆ ಪಾಕಿಸ್ತಾನವನ್ನು ಗೆಲುವಿನ ಗುರಿ ತಲುಪಿಸಿದ್ದರು.
PTI

ಈ ಪಂದ್ಯದಲ್ಲಿ ಶೋಯಿಬ್ ಮಲಿಕ್ ಅಜೇಯ 24 ರನ್ ಗಳಿಸುವ ಮೂಲಕ ಆಫ್ರಿದಿಯವರಿಗೆ ತಕ್ಕ ಸಾಥ್ ನೀಡಿದ್ದರು. ಆಫ್ರಿದಿ-ಮಲಿಕ್‌ರ ಮುರಿಯದ ಮೂರನೇ ವಿಕೆಟಿಗೆ 76 ರನ್ನುಗಳ ಜತೆಯಾಟ ವಿಶ್ವಕಪ್ ವಿಜಯದಲ್ಲಿ ಪ್ರಮುಖ ಪಾತ್ರವಹಿಸಿತ್ತು.

ಆ ಮೂಲಕ ಕಳೆದ 17 ವರ್ಷದಿಂದ ವಿಶ್ವಕಪ್ ಪ್ರಶಸ್ತಿಯಿಂದ ದೂರ ಉಳಿದಿದ್ದ ಪಾಕಿಸ್ತಾನವು ಶ್ರೀಲಂಕಾವನ್ನು ಎಂಟು ವಿಕೆಟುಗಳ ಅಂತರದಿಂದ ಮಣಿಸಿ ಲಾರ್ಡ್ಸ್‌ನಲ್ಲಿ ಮೆರೆದಾಡಿತ್ತು.

"ಇದೊಂದು ಒತ್ತಡದಿಂದ ಕೂಡಿದ ಪಂದ್ಯವಾಗಿತ್ತು. ನಾನು ಕಣಕ್ಕಿಳಿದಾಗ 20 ಓವರುಗಳು ಮುಗಿಯುವವರೆಗೆ ಆಡಬೇಕೆಂದು ಯೋಚಿಸಿದ್ದೆ" ಎಂದು ಮಲಿಕ್ ಪ್ರತಿಕ್ರಿಯಿಸಿದ್ದಾರೆ.

"ಶಾಹಿದ್‌ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಗೆಲುವಿನ ಎಲ್ಲಾ ಕೀರ್ತಿಯೂ ಅವರಿಗೇ ಸಲ್ಲಬೇಕು. ವಿಕೆಟ್ ಬಿಟ್ಟುಕೊಡಬೇಡಿ, ನಾನು ಕೂಡ ಕೆಲ ರನ್ ಗಳಿಸುತ್ತೇನೆ ಎಂದು ನಾನು ಅವರಿಗೆ ತಿಳಿಸಿದ್ದೆ. ಇದರಿಂದಾಗಿ ನಾವು ಪಂದ್ಯವನ್ನು ಸುಖಾಂತ್ಯಗೊಳಿಸಿದೆವು. ಅವರೊಬ್ಬ ಶ್ರೇಷ್ಠ ಕ್ರಿಕೆಟ್ ಆಟಗಾರ" ಎಂದು ಮಲಿಕ್ ಮೆಚ್ಚುಗೆ ವ್ಯಕ್ತಪಡಿಸಿದರು.

ತನ್ನ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರ್‌ಗಳನ್ನೆತ್ತಿದ್ದ ಆಫ್ರಿದಿ ಬಗ್ಗೆ ನಾಯಕ ಯೂನಿಸ್ ಖಾನ್ ಕೂಡ ಹೊಗಳಿಕೆಯ ಸುರಿಮಳೆಯನ್ನೇ ಸುರಿಸಿದ್ದಾರೆ.

"ಶಾಹಿದ್ ಆಫ್ರಿದಿಯವರದ್ದು ಆಶ್ಚರ್ಯ ತರಿಸುವ ಬ್ಯಾಟಿಂಗ್. ಅವರು ಮೂರನೇ ಕ್ರಮಾಂಕಕ್ಕೆ ಹೇಳಿ ಮಾಡಿಸಿದ ದಾಂಡಿಗ ಎಂಬುವುದು ನನ್ನ ಲೆಕ್ಕಾಚಾರವಾಗಿತ್ತು. ಅದು ನಿಜವಾಗಿದೆ. ಕಳೆದೆರಡು ಪಂದ್ಯಗಳಲ್ಲಿ ಅವರದ್ದು ಅಮೋಘ ಪ್ರದರ್ಶನ" ಎಂದು ಯೂನಿಸ್ ಬಣ್ಣಿಸಿದ್ದಾರೆ.

ಪಾಕಿಸ್ತಾನದಾದ್ಯಂತ ವಿಶ್ವಕಪ್ ವಿಜಯೋತ್ಸವ ನಡೆಯುತ್ತಿದ್ದು ವಿಶೇಷವಾಗಿ ಶಾಹಿದ್ ಆಫ್ರಿದಿಯವರನ್ನು ಕೊಂಡಾಡಲಾಗುತ್ತಿದೆ. ಜತೆಗೆ ಯೂನಿಸ್ ಖಾನ್, ಅಬ್ದುಲ್ ರಜಾಕ್‌ರ ಬಗ್ಗೆಯೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಿನ ಟೀವಿ ವಾಹಿನಿಗಳು ಕೂಡ ಎಡೆಬಿಡದೆ ಕ್ರಿಕೆಟ್ ಸುದ್ದಿಗಳನ್ನು ವರ್ಣರಂಜಿತವಾಗಿ ಬಿತ್ತರಿಸುತ್ತಿವೆ ಎಂದು ವರದಿಯಾಗಿದೆ.