ಐರ್ಲೆಂಡನ್ನು ಸುಲಭವಾಗಿ ಮಣಿಸಿದ ಪಾಕಿಸ್ತಾನ

ಸೋಮವಾರ, 15 ಜೂನ್ 2009 (21:21 IST)
ಕಮ್ರಾನ್ ಅಕ್ಮಲ್ ಅಮೋಘ ಅರ್ಧಶತಕ ಹಾಗೂ ಸಯೀದ್ ಅಜ್ಮಲ್ ಬೌಲಿಂಗ್ ನೆರವಿನಿಂದ ಪಾಕಿಸ್ತಾನವು ಐರ್ಲೆಂಡ್ ವಿರುದ್ಧದ ಸೂಪರ್ ಎಂಟರ ಕೊನೆಯ ಪಂದ್ಯದಲ್ಲಿ 39 ರನ್ನುಗಳ ಸುಲಭ ಜಯ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ನಿಗದಿತ 20 ಓವರುಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 159 ರನ್ ಪೇರಿಸಿತ್ತು. ಇದರ ಹಿಂದೆ ಬಿದ್ದ ಐರ್ಲೆಂಡ್ 9 ವಿಕೆಟ್ ನಷ್ಟಕ್ಕೆ 120 ರನ್ ಮಾಡಿತು.

ಸದಾ ವಿವಾದಗಳಲ್ಲೇ ಪಾಕಿಸ್ತಾನ ತಂಡ ಮುಳುಗೇಳುತ್ತಿದ್ದರೂ ನಿರ್ವಹಣೆಯಲ್ಲಿ ಹಿಂದೆ ಬಿದ್ದಿಲ್ಲ ಎನ್ನುವುದಕ್ಕೆ ಈ ಪಂದ್ಯವೂ ಸಾಕ್ಷಿಯಾಯಿತು. ಅಲ್ಲದೆ ಯೂನಿಸ್ ಖಾನ್‌ರ ನಾಯಕತ್ವದ ಚಾಕಚಕ್ಯತೆಯೂ ಆಗಾಗ ಗಮನ ಸೆಳೆಯುತ್ತಿತ್ತು. ಸೆಮಿಫೈನಲ್ ಹಾದಿಯ ಬಗ್ಗೆ ಸ್ಪಷ್ಟತೆ ಮೂಡಲು ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಮುಗಿಯಬೇಕಿದೆ.

ಪಾಕಿಸ್ತಾನಕ್ಕೆ ಕಮ್ರಾನ್ ಅಕ್ಮಲ್ (57) ಮತ್ತು ಶಾಹಜಾಬ್ ಹಸನ್ (23) ಅತ್ಯುತ್ತಮ ತಲಪಾಯ ಹಾಕಿದ್ದರು. ಕಮ್ರಾನ್ ತನ್ನ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್‌ಗೂ ಕಾರಣರಾಗಿದ್ದರು.

ಶಾಹಿದ್ ಆಫ್ರಿದಿ 13 ಎಸೆತಗಳಿಂದ 24 ರನ್ ಚಚ್ಚಿದರೆ ಮಿಸ್ಬಾ ಉಲ್ ಹಕ್ 20 ರನ್ ದಾಖಲಿಸಿದ್ದರು. ನಾಯಕ ಯೂನಿಸ್ ಖಾನ್ 10ಕ್ಕೆ ವಿಕೆಟ್ ಕೊಟ್ಟು ಹೊರಟು ಹೋಗಿದ್ದರು.

ಅಬ್ದುಲ್ ರಜಾಕ್ (15) ಮತ್ತು ಶೋಯಿಬ್ ಮಲಿಕ್ (4) ಅಜೇಯರಾಗುಳಿದಿದ್ದಾರೆ. ಐರ್ಲೆಂಡ್ ಪರ ಕೈಯ್ಲ್ ಮೆಕಾಲನ್ ಎರಡು ಹಾಗೂ ಟ್ರೆಂಟ್ ಜಾನ್ಸ್‌ಟನ್, ಅಲೆಕ್ಸ್ ಕುಸಾಕ್, ರೇಗಾನ್ ವೆಸ್ಟ್ ತಲಾ ಒಂದೊಂದು ವಿಕೆಟ್ ಪಡೆದಿದ್ದರು.

ಐರ್ಲೆಂಡ್ ಆಟ ಶುರು ಮಾಡುತ್ತಿದ್ದಂತೆ ಆರಂಭಿಕ ಆಟಗಾರ ನೈಲ್ ಓಬ್ರಿಯಾನ್‌ರನ್ನು (7) ಕಳೆದುಕೊಂಡರೂ ದೃತಿಗೆಡದೆ ವಿಲಿಯಮ್ ಪೋರ್ಟರ್‌ಫೀಲ್ಡ್ (40) ಅಮೋಘ ಪ್ರದರ್ಶನ ನೀಡಿದರು. ಅವರು ಸಯೀದ್ ಅಜ್ಮಲ್‌ಗೆ ವಿಕೆಟ್‌ ಒಪ್ಪಿಸುವ ಮೊದಲು 36 ಎಸೆತಗಳಿಂದ ತನ್ನ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿಗಳಿಗೂ ಕಾರಣರಾಗಿದ್ದರು.

ಪೌಲ್ ಸ್ಟಿರ್ಲಿಂಗ್ (17) ಮತ್ತು ಕೆವಿನ್ ಓಬ್ರಿಯಾನ್ (26) ಎರಡಂಕಿ ದಾಟಿದರೆ ಜಾನ್ ಮೂನೀ (2), ಟ್ರೆಂಟ್ ಜಾನ್ಸ್‌ಟನ್ (0), ಅಲೆಕ್ಸ್ ಕುಸಾಕ್ (2), ಆಂಡ್ರ್ಯೂ ವೈಟ್ (5), ರೇಗಾನ್ ವೆಸ್ಟ್ (1) ಅಲ್ಪ ರನ್ ಗಳಿಸಿದ್ದಾಗಲೇ ಹೊರಟು ಹೋಗಿದ್ದರು.

ಕೈಯ್ಲ್ ಮೆಕಾಲನ್ ಮತ್ತು ಬಾಯ್ಡ್ ರಾನ್ಕಿನ್ ಕ್ರಮವಾಗಿ 2 ಮತ್ತು 5ರೊಂದಿಗೆ ಅಜೇಯರಾಗುಳಿದಿದ್ದಾರೆ.

ಪಾಕ್ ಪರ ಸಯೀದ್ ಅಜ್ಮಲ್ 19ಕ್ಕೆ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ. ಉಮರ್ ಗುಲ್ 19ಕ್ಕೆ ಎರಡು, ಶಾಹಿದ್ ಆಫ್ರಿದಿ ಮತ್ತು ಮೊಹಮ್ಮದ್ ಆಮೀರ್ ತಲಾ ಒಂದೊಂದು ವಿಕೆಟ್ ಕಿತ್ತರು.

ವೆಬ್ದುನಿಯಾವನ್ನು ಓದಿ