ಟ್ವೆಂಟಿ-20 ವಿಶ್ವಕಪ್ ಸೋಲಿಗೆ ಐಪಿಎಲ್ ಕಾರಣ ಎಂಬ ಗ್ಯಾರಿ ಕರ್ಸ್ಟನ್ ಆರೋಪವನ್ನು ನಿರಾಕರಿಸಿರುವ ಬಿಸಿಸಿಐ, ಯಾವುದೇ ಟೂರ್ನಮೆಂಟ್‌ನಲ್ಲಿ ಆಡುವಂತೆ ಬಳಲಿದ ಆಟಗಾರರನ್ನು ಒತ್ತಾಯಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಅತ್ತ ಮಾಜಿ ಆಟಗಾರರು ಕೂಡ ತರಬೇತುದಾರ ಕರ್ಸ್ಟನ್ ಆರೋಪಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಸಿಸಿಐ ಮಾಧ್ಯಮ ಮತ್ತು ಹಣಕಾಸು ಸಮಿತಿಯ ಅಧ್ಯಕ್ಷ ರಾಜೀವ್ ಶುಕ್ಲಾ ಮಾತನಾಡುತ್ತಾ, "ಯಾವುದೇ ಆಟಗಾರರು ಬಳಲಿದ್ದರೆ ಅಥವಾ ಟೂರ್ನಮೆಂಟ್‌ಗಳಲ್ಲಿ ಆಡಲು ಅಸಮರ್ಥರಾಗಿದ್ದರೆ ಅಂಥವರು ಮಂಡಳಿಗೆ ಮಾಹಿತಿ ನೀಡಬೇಕು. ಅಂತಹ ಆಟಗಾರರಿಗೆ ಅಥವಾ ಗಾಯಗೊಂಡವರ ಜಾಗಕ್ಕೆ ಬದಲಿ ಆಟಗಾರರನ್ನು ಮಂಡಳಿ ನೇಮಿಸುತ್ತದೆ. ನಂತರ ಆತ ದೈಹಿಕ ಕ್ಷಮತೆ ಹೊಂದಿದಲ್ಲಿ ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ" ಎಂದಿದ್ದಾರೆ.
PTI
ಬಿಸಿಸಿಐ ಯಾವುದೇ ಆಟಗಾರನನ್ನು ಐಪಿಎಲ್‌ನಲ್ಲಿ ಆಡುವಂತೆ ಒತ್ತಾಯ ಮಾಡಿಲ್ಲ. ಸುಸ್ತುಗೊಂಡಿದ್ದ ಆಟಗಾರರು ಯಾವುದೇ ಮುಲಾಜಿಲ್ಲದೆ ವಿಶ್ರಾಂತಿ ಬಯಸುವ ಅವಕಾಶ ನೀಡಲಾಗಿತ್ತು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಕರ್ಸ್ಟನ್ ಆರೋಪದ ಬಗ್ಗೆ ಶುಕ್ಲಾ ಬಳಿ ನೇರವಾಗಿ ಪ್ರಶ್ನಿಸಿದಾಗ, "ಇವೆಲ್ಲವೂ ದೇಶದಲ್ಲಿನ ಕ್ರೀಡೆಯಲ್ಲಿ ಸುಧಾರಣೆ ತರಲು ನೀಡಿರುವ ಸಲಹೆಗಳು. ಪ್ರಸಕ್ತ ಲಂಡನ್‌ನಲ್ಲಿರುವ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಇದರ ಬಗ್ಗೆ ಗಮನ ಹರಿಸಲಿದ್ದಾರೆ" ಎಂದರು.
ಅದೇ ಹೊತ್ತಿಗೆ ಕರ್ಸ್ಟನ್ ಹೇಳಿಕೆಯನ್ನು ಮಾಜಿ ಕ್ರಿಕೆಟ್ ಆಟಗಾರರುಗಳಾದ ಸಂದೀಪ್ ಪಾಟೀಲ್, ಚಂದು ಬೋರ್ಡೆ ಮತ್ತು ಲಾಲ್‌ಚಂದ್ ರಜಪೂತ್ ತೀವ್ರವಾಗಿ ಖಂಡಿಸಿದ್ದಾರೆ.
"ಅವರ ಹೇಳಿಕೆಯು ನನಗೆ ಆಶ್ಚರ್ಯ ತಂದಿದೆ. ಕರ್ಸ್ಟನ್ ಭಾರತದ ಸೋಲಿಗೆ ಐಪಿಎಲ್‌ನತ್ತ ಬೆರಳು ತೋರಿಸುವುದಾದರೆ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ಇಂಡೀಸ್‌ಗಳು ವಿಶ್ವಕಪ್‌ಗಾಗಿ ಹೇಗೆ ಪೂರ್ವತಯಾರಿ ನಡೆಸಿದವು?" ಎಂದು ಸಂದೀಪ್ ಪಾಟೀಲ್ ಪ್ರಶ್ನಿಸಿದ್ದಾರೆ.
ಈ ಆರೋಪವನ್ನು ಕರ್ಸ್ಟನ್ ಮಾತ್ರ ಮಾಡಲು ಸಾಧ್ಯ ಎಂದಿರುವ ಪಾಟೀಲ್, "ಪಂದ್ಯ ಗೆಲ್ಲಿಸಿಕೊಡುವ ಮೂವರಾದ ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ಮತ್ತು ಯೂಸುಫ್ ಪಠಾಣ್ ಇರುವಾಗ ರವೀಂದ್ರ ಜಡೇಜಾರನ್ನು ಅಗ್ರ ಕ್ರಮಾಂಕದಲ್ಲಿ ಕಳುಹಿಸಲು ಅವರು ಯಾಕೆ ಬಿಟ್ಟರು? ನಿರ್ಣಾಯಕ ಪಂದ್ಯದಲ್ಲಿ ಬ್ಯಾಟಿಂಗ್ ಕ್ರಮಾಂಕಗಳನ್ನು ಬದಲಾಯಿಸುವ ಮೂಲಕ ಪ್ರಯೋಗಗಳನ್ನು ಯಾಕೆ ಮಾಡಲಾಯಿತು?" ಎಂದು ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಭಾರತ ಗೆದ್ದುಕೊಂಡಿದ್ದ 2007ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ತರಬೇತುದಾರರಾಗಿದ್ದ ಮತ್ತೊಬ್ಬ ಮಾಜಿ ಆಟಗಾರ ಲಾಲ್‌ಚಂದ್ ರಜಪೂತ್ ಮಾತನಾಡುತ್ತಾ, "2007ರಲ್ಲಿ ಪೂರ್ವತಯಾರಿ ನಡೆಸಲು ನಮಗೆ ಕೇವಲ ಮೂರು ದಿನ ಮಾತ್ರವಿತ್ತು. ಆಗ ನಾವು ಎರಡು ತಂಡಗಳಾಗಿ ದಕ್ಷಿಣ ಆಫ್ರಿಕಾ ತಲುಪಿದ್ದೆವು. ಕೆಲವರು ಇಂಗ್ಲೆಂಡ್‌ನಿಂದ ಪ್ರವಾಸ ಮಾಡಿದ್ದರೆ ಉಳಿದವರು ಭಾರತದಿಂದ ನೇರವಾಗಿ ಬಂದಿದ್ದರು" ಎನ್ನುತ್ತಾ ಐಪಿಎಲ್ ಕಾರಣವಲ್ಲ ಎಂದುತ್ತರಿಸಿದ್ದಾರೆ.
"ಗಿಬ್ಸ್, ಬ್ರಾವೋ ಮತ್ತು ವಾನ್ ಡೆರ್ ಮೆರ್ವೆ ಮುಂತಾದವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಆಟ ನೀಡುತ್ತಿದ್ದಾರೆ. ನಾವು ತಂಡವಾಗಿ ಶ್ರೇಷ್ಠ ಆಟ ನೀಡಲಿಲ್ಲ ಎನ್ನುವುದು ಸ್ವೀಕರಿಸಬೇಕು" ಎಂದರು.
ಅದಕ್ಕಿಂತಲೂ ಮುಖ್ಯವಾಗಿ ಎದುರಾಳಿ ತಂಡಗಳು ಭಾರತದ ವಿರುದ್ಧ ರೂಪಿಸಿದ ಯಶಸ್ವಿ ತಂತ್ರಗಾರಿಕೆಗಳಿಗಾಗಿ ನಾವು ಮೆಚ್ಚುಗೆ ವ್ಯಕ್ತಪಡಿಸಬೇಕು. ಇಷ್ಟೆಲ್ಲಾ ಆದರೂ ನಮ್ಮದು ಅತ್ಯುತ್ತಮ ಆಲ್-ರೌಂಡ್ ತಂಡ ಎಂದು ರಜಪೂತ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಮಾಜಿ ನಾಯಕ, ಹಿರಿಯ ಆಯ್ಕೆಗಾರ ಹಾಗೂ ಕ್ರಿಕೆಟ್ ಮ್ಯಾನೇಜರ್ ಚಂದು ಬೋರ್ಡೆ ಕೂಡ ಪ್ರಸಕ್ತ ತರಬೇತುದಾರನ ಅಭಿಪ್ರಾಯವನ್ನು ಒಪ್ಪಿಕೊಂಡಿಲ್ಲ.
"ಐಪಿಎಲ್ ಮತ್ತು ಟ್ವೆಂಟಿ-20 ವಿಶ್ವಕಪ್‌ಗಿರುವ ವ್ಯತ್ಯಾಸವೇನೆಂದೇ ನನಗೆ ತಿಳಿಯುತ್ತಿಲ್ಲ. ಎರಡೂ ಒಂದೇ. ಹಾಗಾಗಿ ವಿಶ್ವ ಚಾಂಪಿಯನ್‌ಶಿಪ್‌ಗೆ ಐಪಿಎಲ್ ಅತ್ಯುತ್ತಮ ವೇದಿಕೆ" ಎಂದು ಬೋರ್ಡೆ ತಿಳಿಸಿದ್ದಾರೆ.