ಟೀಮ್ ಇಂಡಿಯಾ ಸೋಲಿಗೆ ಐಪಿಎಲ್‌ ಕಾರಣ: ಕರ್ಸ್ಟನ್

ಮಂಗಳವಾರ, 16 ಜೂನ್ 2009 (12:00 IST)
ಟ್ವೆಂಟಿ-20 ವಿಶ್ವಕಪ್‌ನಿಂದ ಅವಮಾನಕಾರಿಯಾಗಿ ಹೊರ ಬಿದ್ದಿರುವ ಟೀಮ್ ಇಂಡಿಯಾ ಸೋಲಿಗೆ ಐಪಿಎಲ್‌‌ನತ್ತ ಬೊಟ್ಟು ಮಾಡಿರುವ ತರಬೇತುದಾರ ಗ್ಯಾರಿ ಕರ್ಸ್ಟನ್, ಮುಂಚೂಣಿ ಆಟಗಾರರಿಗೆ ಲಾಭದಾಯಕ ಟೂರ್ನಿಯಿಂದ ವಿಶ್ರಾಂತಿ ನೀಡುವ ಬಗ್ಗೆ ಭಾರತೀಯ ಕ್ರಿಕೆಟ್ ಆಡಳಿತವು ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಭಾನುವಾರದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲುಣ್ಣುವ ಮೂಲಕ ಟ್ವೆಂಟಿ-20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲಾಗದ ಹಾಲಿ ಚಾಂಪಿಯನ್ ಭಾರತದ ಬಗ್ಗೆ ಎಲ್ಲೆಡೆಯಿಂದ ಟೀಕೆಗಳು ಬರುತ್ತಿರುವ ಹೊತ್ತಿನಲ್ಲೇ ಕೋಚ್ ಕೂಡ ದನಿಗೂಡಿಸಿದ್ದಾರೆ. ಅವರ ಪ್ರಕಾರ ಆಟಗಾರರು ಗಾಯಾಳುಗಳಾಗಿ ಟೂರ್ನಮೆಂಟ್‌ಗೆ ತೆರಳಿದ್ದುದೇ ಹಿನ್ನಡೆಗೆ ಕಾರಣ.

"ಐಪಿಎಲ್ ಸಂದರ್ಭದಲ್ಲಿ ಇಂತಹ ಸಾಕಷ್ಟು ತೊಂದರೆಗಳು ಕಂಡು ಬಂದಿವೆ" ಎಂದು ಕರ್ಸ್ಟನ್ ತಂಡದ ಸೋಲಿನ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದರು.

"ಐಪಿಎಲ್ ನಡೆಯುತ್ತಿರುವಾಗ ನಾವು ಆಟಗಾರರ ಜತೆಗಿನ ಸಂಪರ್ಕವನ್ನು ಕಳೆದುಕೊಂಡೆವು. ಅವರು ಸಂಬಂಧಪಟ್ಟ ಫ್ರಾಂಚೈಸಿಗಳ ಜವಾಬ್ದಾರಿಯಲ್ಲಿರುವುದರಿಂದ ನಮಗದು ಸಾಧ್ಯವಾಗಿರಲಿಲ್ಲ" ಎಂದಿದ್ದಾರೆ.

"ಅಲ್ಲಿ ಆಡಲಾಗುವ ಕ್ರಿಕೆಟ್‌ನ ಪ್ರಮಾಣ ಮತ್ತೊಂದು ಪ್ರಮುಖ ವಿಚಾರ. ಇದರಿಂದಾಗುವ ತೊಂದರೆಗಳು ಈ ಟೂರ್ನಮೆಂಟ್‌ವರೆಗೂ ಮುಂದುವರಿಯುತ್ತದೆ. ಹಾಗಾಗಿ ನಾವು ಆಟಗಾರರನ್ನು ಅದರಿಂದ ಹೊರಗುಳಿಯುವಂತೆ ಮಾಡುವ ಬಗ್ಗೆ ಯೋಚಿಸಬೇಕಾಗುತ್ತದೆ. ಆದರೆ ಇದು ಸಾಧ್ಯವಾಗುತ್ತದೋ ಅಥವಾ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ" ಎಂದು ಐಪಿಎಲ್ ಬಗ್ಗೆ ತನಗಿರುವ ಅಸಮಾಧಾನವನ್ನು ತೋಡಿಕೊಂಡರು.

ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ಟ್ವೆಂಟಿ-20 ವಿಶ್ವಕಪ್ ನಡೆಯುವ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ವೇಳಾಪಟ್ಟಿಯು ತೀರಾ ಬಿಗುವಿನಿಂದ ಕೂಡಿದೆ. ಇದೇ ಸಂದರ್ಭದಲ್ಲಿ ಕಳೆದೆರಡು ವರ್ಷಗಳಿಂದ ಐಪಿಎಲ್ ನಡೆಯುತ್ತಾ ಬಂದಿರುವ ಕಾರಣ ಒತ್ತಡ ಹೆಚ್ಚಬಹುದು ಎಂದು ಊಹಿಸಲಾಗಿದೆ.

ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಭುಜ ನೋವಿಗೊಳಗಾಗಿದ್ದರಿಂದ ಈ ಬಾರಿಯ ವಿಶ್ವಕಪ್‌ನಲ್ಲಿ ಯಾವೊಂದು ಪಂದ್ಯವನ್ನು ಆಡಲಾಗಿರಲಿಲ್ಲ. ಜಹೀರ್ ಖಾನ್ ಕೂಡ ಐಪಿಎಲ್‌ನಲ್ಲಿ ಭುಜ ಗಾಯ ಮಾಡಿಕೊಂಡಿದ್ದರು. ಹೀಗಾಗಿ ವಿಶ್ವಕಪ್ ಆರಂಭಿಕ ಪಂದ್ಯಗಳಿಂದ ಖಾನ್ ಹೊರಗುಳಿದಿದ್ದರು.

ಹಾಗೊಂದು ವೇಳೆ ಇಶಾಂತ್ ಶರ್ಮಾರನ್ನು ಐಪಿಎಲ್‌ನಿಂದ ವಿಶ್ರಾಂತಗೊಳಿಸಿದರೆ 900,000 ಅಮೆರಿಕನ್ ಡಾಲರ್, ಧೋನಿ 1.35 ಮಿಲಿಯನ್ ಡಾಲರ್ ಹಾಗೂ ಆರಂಭಿಕ ಆಟಗಾರ ಗೌತಮ್ ಗಂಭೀರ್ 750,000 ಡಾಲರ್ ನಷ್ಟ ಅನುಭವಿಸಲಿದ್ದಾರೆ.

ಈಗ ಕ್ರಿಕೆಟ್‌ನ ಪ್ರಮಾಣ ಹೆಚ್ಚುತ್ತಿರುವ ಕಾರಣದಿಂದಾಗಿ ಬೃಹತ್ ತಂಡವನ್ನು ಹೊಂದುವ ಅಗತ್ಯವನ್ನೂ ಕರ್ಸ್ಟನ್ ಇದೇ ಸಂದರ್ಭದಲ್ಲಿ ಒತ್ತಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ