ಪಾಕಿಸ್ತಾನದ ಕ್ರಿಕೆಟನ್ನು ರಕ್ಷಿಸಿ: ವಿಶ್ವಕ್ಕೆ ಯೂನಿಸ್ ಮೊರೆ

ಸೋಮವಾರ, 22 ಜೂನ್ 2009 (09:57 IST)
ಶ್ರೀಲಂಕಾ ವಿರುದ್ಧ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಜಯಭೇರಿ ಬಾರಿಸಿದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮನವಿ ಮಾಡಿದ ಪಾಕಿಸ್ತಾನ ತಂಡದ ನಾಯಕ ಯೂನಿಸ್ ಖಾನ್, ಸಂಕಷ್ಟದಲ್ಲಿರುವ ತನ್ನ ದೇಶಕ್ಕೆ ಬಂದು ಆಡುವಂತೆ ವಿನಂತಿಸಿದ್ದಾರೆ.

ಕಳೆದ ಮಾರ್ಚ್‌ ತಿಂಗಳಲ್ಲಿ ಪಾಕಿಸ್ತಾನ ಪ್ರವಾಸ ಮಾಡಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಗಡ್ಡಾಫಿ ಕ್ರೀಡಾಂಗಣದ ಸಮೀಪ ಉಗ್ರಗಾಮಿಗಳು ದಾಳಿ ನಡೆಸಿದ್ದರು. ಲಾಹೋರ್‌ನ ಈ ದುರ್ಘಟನೆಯಿಂದಾಗಿ ಆರು ಮಂದಿ ಪೊಲೀಸ್ ಸಿಬಂದಿ ಹಾಗೂ ಇಬ್ಬರು ನಾಗರಿಕರು ಸಾವನ್ನಪ್ಪಿದ್ದರೆ, ಲಂಕಾ ತಂಡದ ಹಲವು ಕ್ರಿಕೆಟಿಗರು ಗಾಯಾಳುಗಳಾಗಿದ್ದರು. ಈ ಹಿನ್ನಲೆಯಲ್ಲಿ ಜಗತ್ತಿನ ಯಾವುದೇ ಕ್ರಿಕೆಟ್ ತಂಡಗಳು ಪಾಕಿಸ್ತಾನ ಪ್ರವಾಸ ಮಾಡಲು ಹಿಂಜರಿಯುತ್ತಿವೆ.

ಇದರ ಬೆನ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕೂಡ ಭದ್ರತಾ ಹಿನ್ನಲೆಯಲ್ಲಿ ವಿಶ್ವಕಪ್ 2011ರ ಯಾವುದೇ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಲಾಗುವುದಿಲ್ಲ ಎಂದು ಪ್ರಕಟಿಸಿತ್ತು.

"ಇಂತಹ ಒಂದು ಜಯ ಪಾಕಿಸ್ತಾನಕ್ಕೆ ಬೇಕಾಗಿತ್ತು, ಅದರ ಅಗತ್ಯ ನಮಗಿತ್ತು. ಅದರಲ್ಲೂ ವಿಶ್ವಕಪ್ ಅತ್ಯಮೂಲ್ಯವಾದದ್ದು. ಇದು ನಮ್ಮ ದೇಶದ ಜನತೆಗೆ ನೀಡಿದ ಕೊಡುಗೆ" ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದ ಅವರು ಐಸಿಸಿ ಸದಸ್ಯ ರಾಷ್ಟ್ರಗಳು ಪಾಕಿಸ್ತಾನ ಪ್ರವಾಸ ಮಾಡುವಂತೆ ಒತ್ತಾಯಿಸಿದರು.

"ನಾವೀಗ ಚಾಂಪಿಯನ್‌ಗಳು. ನಾನು ಇತರ ರಾಷ್ಟ್ರಗಳಿಗೆ ಮಾಡಿಕೊಳ್ಳುತ್ತಿರುವ ಮನವಿಯೇನೆಂದರೆ ದಯವಿಟ್ಟು ಪಾಕಿಸ್ತಾನಕ್ಕೆ ಬನ್ನಿ. ಅದರಲ್ಲೂ ವಿಶೇಷವಾಗಿ ನಮ್ಮ ಯುವ ಆಟಗಾರರಿಗೆ ತಾಯ್ನೆಲದ ಸರಣಿಗಳ ಅಗತ್ಯವಿದೆ" ಎಂದರು.

ನಾವು ಕ್ರಿಕೆಟನ್ನು ಹೇಗೆ ಪ್ರಚಾರ ಮಾಡಲಿ. ನನ್ನ ಮಗ ಅಥವಾ ಪಕ್ಕದ ಮನೆಯವರ ಮಗನನ್ನು ಕ್ರಿಕೆಟ್‌ಗೆ ಹೇಗೆ ಪ್ರೋತ್ಸಾಹಿಸಲಿ ಎಂದು ಪ್ರಶ್ನಿಸಿದ ಯೂನಿಸ್, ಇದಕ್ಕಾಗಿ ನಮಗೆ ಪಾಕಿಸ್ತಾನದಲ್ಲಿ ಕ್ರಿಕೆಟ್ ಬೇಕಾಗಿದೆ ಎಂದು ಜಾಗತಿಕ ಸಮುದಾಯಕ್ಕೆ ಮನವಿ ಮಾಡಿದರು.

ಇದ್ಯಾವುದಕ್ಕೂ ನಾವು ಕಾರಣರಲ್ಲ. ಇದು ನಮ್ಮ ತಪ್ಪಲ್ಲ. ಕ್ರೀಡೆಯು ರಾಜಕೀಯದಿಂದ ದೂರ ಉಳಿಯಬೇಕು ಮತ್ತು ಅದಕ್ಕೆ ರಾಜಕೀಯದ ಅಗತ್ಯವಿಲ್ಲ ಎಂದು ಯೂನಿಸ್ ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು.

ವಿಶ್ವ ಕ್ರಿಕೆಟ್‌ಗೆ ಪಾಕಿಸ್ತಾನ ಯಾಕೆ ಬೇಕು ಮತ್ತು ಪಾಕಿಸ್ತಾನಕ್ಕೆ ವಿಶ್ವ ಕ್ರಿಕೆಟ್ ಯಾಕೆ ಬೇಕೆಂಬುದನ್ನು ಪಾಕಿಸ್ತಾನ ತೋರಿಸಿಕೊಟ್ಟಿದೆ ಎಂದೂ ತಿಳಿಸಿದ್ದಾರೆ.

ಶಾಹಿದ್ ಆಪ್ರಿದಿ ಅಮೋಘ 54 ರನ್ನುಗಳು ಹಾಗೂ ಅಬ್ದುಲ್ ರಜಾಕ್ ಅಮೂಲ್ಯ ಮೂರು ವಿಕೆಟ್‌ಗಳ ಸಹಾಯದಿಂದ ಶ್ರೀಲಂಕಾ ವಿರುದ್ಧ ಎಂಟು ವಿಕೆಟುಗಳ ಅಂತರದಿಂದ ಜಯ ಸಾಧಿಸಿ ಟ್ವೆಂಟಿ-20 ವಿಶ್ವಕಪ್ ಕಿರೀಟವನ್ನು ಪಾಕಿಸ್ತಾನ ಭಾನುವಾರ ಮುಡಿಗೇರಿಸಿಕೊಂಡಿತ್ತು.

ವೆಬ್ದುನಿಯಾವನ್ನು ಓದಿ