ಶುಭಾವಸರದಲ್ಲೇ ಯೂನಿಸ್ ಬಾಂಬ್; ಟ್ವೆಂಟಿ-20ಗೆ ವಿದಾಯ

ಸೋಮವಾರ, 22 ಜೂನ್ 2009 (09:31 IST)
ಪಾಕಿಸ್ತಾನಕ್ಕೆ ಟ್ವೆಂಟಿ-20 ವಿಶ್ವಕಪ್ ಗೆದ್ದುಕೊಟ್ಟ ಬೆನ್ನಲ್ಲೇ ಆಘಾತದ ಬಾಂಬ್ ಎಸೆದಿರುವ ನಾಯಕ ಯೂನಿಸ್ ಖಾನ್, ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

"ನನಗೀಗಾಗಲೇ 34 ವರ್ಷ. ಈ ಪ್ರಕಾರದ ಕ್ರಿಕೆಟ್‌ಗೆ ನಿಜಕ್ಕೂ ನನ್ನದು ಹೊಂದಿಕೊಳ್ಳುವ ಪ್ರಾಯವಲ್ಲ" ಎಂದು ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭರಪೂರ ರನ್ ಕಲೆ ಹಾಕಿದ್ದ ಪಾಕಿಸ್ತಾನ ದಾಂಡಿಗ ಅಭಿಪ್ರಾಯಪಟ್ಟರು.

ಅಲ್ಲದೆ ತಾನು ಮುಂದಕ್ಕೆ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹರಿಸಲಿದ್ದು ಚುಟುಕು ಕ್ರಿಕೆಟ್‌ನಿಂದ ದೂರ ಉಳಿಯಲಿದ್ದೇನೆ ಎಂದರು.
PTI

"ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟ್ವೆಂಟಿ-20 ಪಂದ್ಯ. ಟ್ವೆಂಟಿ-20ಯಿಂದ ನಿವೃತ್ತಿ ಪಡೆಯಲು ಇಂದು ನಾನು ನಿರ್ಧರಿಸಿದ್ದೇನೆ" ಎನ್ನುವ ಮೂಲಕ ಅಧಿಕೃತವಾಗಿ ತನ್ನ ತೀರ್ಮಾನವನ್ನು ಪ್ರಕಟಿಸಿ ಕ್ರಿಕೆಟ್ ಜಗತ್ತನ್ನೇ ಅಚ್ಚರಿಯಲ್ಲಿ ಕೆಡವಿದ್ದಾರೆ.

ಪಾಕಿಸ್ತಾನ ತಂಡದಲ್ಲೀಗ ಮೊಹಮ್ಮದ್ ಅಮೀರ್ ಮತ್ತು ಆಲ್-ರೌಂಡರ್ ಫಾವದ್ ಆಲಮ್‌ರಂತಹ ಯುವ ಪ್ರತಿಭಾವಂತ ಆಟಗಾರರಿದ್ದಾರೆ. ಅವರು ಈ ಪ್ರಕಾರದಲ್ಲಿ ದೇಶದ ಹೆಸರು ಮಿಂಚುವಂತೆ ಮಾಡಬಲ್ಲವರು ಎಂದರು.

"ಈ ಪ್ರಕಾರದಲ್ಲಿ ಅದ್ಭುತ ಪ್ರದರ್ಶನ ನೀಡುವ ಕೆಲವು ಪ್ರತಿಭಾವಂತ ಆಟಗಾರರು ನಮ್ಮ ತಂಡದಲ್ಲಿದ್ದಾರೆ. ಅವರು ತಂಡವನ್ನು ಯಶಸ್ಸಿನತ್ತ ಮುನ್ನಡೆಸುವರು" ಎಂದಿರುವ ಯೂನಿಸ್, ಪಾಕಿಸ್ತಾನವು ತನ್ನ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿರುವುದು ತನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲೇ ಹೆಮ್ಮೆಯ ವಿಚಾರ ಎಂದು ಬಣ್ಣಿಸಿಕೊಂಡರು.

ಪಾಕಿಸ್ತಾನದ ಹಿರಿಯ ಅನುಭವಿ ಆಟಗಾರನಾಗಿರುವ ಯೂನಿಸ್ ಖಾನ್‌ರನ್ನು ಟ್ವೆಂಟಿ-20 ವಿಶ್ವಕಪ್ ತಂಡಕ್ಕೆ ಆರಂಭದಲ್ಲಿ ಸೇರಿಸಿಕೊಂಡಿರಲಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಹೊರ ಬಂದ ಆಯ್ಕೆಗಾರ ಅಬ್ದುಲ್ ಖಾದಿರ್ ತಿಳಿಸಿದ್ದರು. ತನ್ನ ಮಾತನ್ನು ಮೀರಿ ಪಿಸಿಬಿಯು ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ ಎಂದೂ ಅವರು ಕಿಡಿ ಕಾರಿದ್ದರು.

ಅದಕ್ಕೂ ಮೊದಲು ಯೂನಿಸ್ ಮತ್ತು ಖಾದಿರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು ಎಂದು ಮೂಲಗಳು ಬಹಿರಂಗಪಡಿಸಿದ್ದವು. ಪ್ರತಿ ವಿಚಾರಗಳಿಗೆ ಯೂನಿಸ್ ವಿರುದ್ಧ ತಗಾದೆ ಎತ್ತುತ್ತಿದ್ದ ಖಾದಿರ್ ಕೊನೆಗೆ ಮಂಡಳಿಯ ತನ್ನ ಹುದ್ದೆಗೆ ರಾಜಿನಾಮೆ ನೀಡಿ ಹೊರ ನಡೆದಿದ್ದರು.