ಈಗಾಗಲೆ ಒಂದರ ಮೇಲೊಂದು ಯಶಸ್ವಿ ಕಾರ್ಯಕ್ರಮವನ್ನು ಬಿತ್ತರಿಸುತ್ತಿರುವ “ಸ್ಟಾರ್ ಸುವರ್ಣ” ಈಗ ವಿಭಿನ್ನವಾದ, ಹೊಸರೂಪದ ಧಾರವಾಹಿಯನ್ನು ವೀಕ್ಷಕರ ಮಡಲಿಗೆ ಹಾಕಲು ಸಜ್ಜಾಗಿದೆ. ಸಂಗೀತವನ್ನೇ ಮುಖ್ಯ ಕಥಾವಸ್ತುವನ್ನಾಗಿರಿಸಿಕೊಂಡು ಹೆಣೆದ ಸುಂದರ ಪ್ರೇಮಕಥೆ `ತ್ರಿವೇಣಿ ಸಂಗಮ'. ಇಂತಹ ಮೆಗಾ ಸೀರಿಯಲ್‍ಗಳು ಕನ್ನಡದಲ್ಲಿ ನಿರ್ಮಾಣವಾಗಿರುವುದು ಕಡಿಮೆ.
ಕನ್ನಡದ ಜನಪ್ರಿಯ ಹಿರಿತೆರೆಯ ನಾಯಕಿ ಅನು ಪ್ರಭಾಕರ್ ಮತ್ತು ಹೆಸರಾಂತ ನಟ ರಾಜೇಶ್ ನಟರಂಗ ಮುಖ್ಯ ಪಾತ್ರದಲ್ಲಿದ್ದಾರೆ. ಈ ಧಾರಾವಾಹಿಯ ಕಥೆಯಲ್ಲಿ ಅವನು ಸಮಾಧಾನಿ, ಇವಳು ಮುಂಗೋಪಿ. ಅವನು ಅಪ್ಪಟ ವೆಜ್, ಅವಳಿಗೆ ಮೀನು ಇಲ್ಲದೆ ಊಟವೇ ಇಲ್ಲ. ಹೀಗೆ ತಾಳ ಮೇಳವಿಲ್ಲದ ನಾಯಕ ತ್ರಿವಿಕ್ರಮ ಮತ್ತು ನಾಯಕಿ ವಾಣಿಯನ್ನು ಸಂಗೀತ ಬೆಸೆಯುವ ಕಥೆಯೇ ತ್ರಿವೇಣಿ ಸಂಗಮ.
ಈ ಧಾರಾವಾಹಿ ಸುಂದರವಾಗಿ ಮೂಡಿಬರಲು ಅನೇಕ ಹಾಡುಗಳನ್ನು ಕಂಪೋಸ್ ಮಾಡಲಾಗಿದೆ. ಕಿರುತೆರೆಯಲ್ಲಿ ಇಂತಹ ಪ್ರಯತ್ನ ತುಂಬಾ ಅಪರೂಪ. ಮಳೆ, ಸಂಗೀತ ಮತ್ತು ಅದ್ಭುತ ಕಲಾವಿದರ ಸಂಗಮವಾಗಿರುವ 'ತ್ರಿವೇಣಿ ಸಂಗಮ' ಕನ್ನಡದ ವೀಕ್ಷಕರ ಮನ ಗೆಲ್ಲುವುದರಲ್ಲಿ ಸಂದೇಹವಿಲ್ಲ.
ಶಶಿಧರ್ ಕೋಟೆ, ಸುರೇಶ್ ರೈ, ಅಪೇಕ್ಷಾ ಪುರೋಹಿತ್, ಕೆಂಪೇಗೌಡ, ಗುರು ಹೆಗಡೆ, ಮಾಲತಿಶ್ರೀ ಮೈಸೂರು, ಶ್ರೀಧರ್ ಮುಂತಾದ ಕಲಾವಿದರು ಮುಖ್ಯ ಭೂಮಿಕೆಯಲ್ಲಿದ್ದಾರೆ. ತಿಲಕ್ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ರಾಗ ಅನುರಾಗದ ನಾದಮಯ ಪ್ರೇಮಕಥೆ “ತ್ರಿವೇಣಿ ಸಂಗಮ” ಫೆಬ್ರವರಿ 6ರಿಂದ ಸೋಮವಾರದಿಂದ ಶನಿವಾರ ಸಂಜೆ 7ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.