ನವದೆಹಲಿ(ಆ.10): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೀಯ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 9.75 ಕೋಟಿ ರೈತರಿಗೆ 19,500 ಕೋಟಿ ರು. ಹಣವನ್ನು ಸೋಮವಾರ ವರ್ಗಾವಣೆ ಮಾಡಿದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಫಲಾನುಭವಿ ರೈತರ ಖಾತೆಗೆ ಪ್ರತಿ ಕಂತಿನಲ್ಲಿ 2 ಸಾವಿರ ರು.ನಂತೆ ಮೂರು ಕಂತಿನಲ್ಲಿ ವಾರ್ಷಿಕ 6000 ರು.ಗಳನ್ನು ಬಿಡುಗಡೆ ಮಾಡುತ್ತಿದೆ. ಸೋಮವಾರ ಆಯೋಜಿಸಿದ್ದ ವರ್ಚುವಲ್ ಕಾರ್ಯಕ್ರಮದ ವೇಳೆ 9ನೇ ಕಂತಿನ ಹಣವನ್ನು ನರೇಂದ್ರ ಮೋದಿ ಅವರು ಫಲಾನುಭವಿಗಳಿಗೆ ಬಿಡುಗಡೆ ಮಾಡಿದರು. ಈ ಮೂಲಕ ಸರ್ಕಾರ ಇದುವರೆಗೆ ರೈತರ ಖಾತೆಗಳಿಗೆ 1.57 ಲಕ್ಷ ಕೋಟಿ ರು.ಗಳನ್ನು ವರ್ಗಾವಣೆ ಮಾಡಿದೆ.
2019ರ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯನ್ನು ಪ್ರಕಟಿಸಿತ್ತು. ನೇರವಾಗಿ ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ.