ಬೆಂಗಳೂರು : ಮೊದಲ ಗ್ಯಾರಂಟಿಯಾಗಿ ಗೃಹಜ್ಯೋತಿ ಯೋಜನೆ ಮಾಡಲಾಗುವುದು. 200 ಯೂನಿಟ್ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಆಗಸ್ಟ್ ತಿಂಗಳಿಂದ ಬರುವ ಬಿಲ್ನಿಂದ ಯೋಜನೆ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗೃಹಜ್ಯೋತಿ ಯೋಜನೆಗೆ ವಾರ್ಷಿಕ ಸರಾಸರಿ ಮಾನದಂಡವಿದೆ. 12 ತಿಂಗಳ ಸರಾಸರಿ ಪಡೆದುಕೊಂಡು ಅದರ ಮೇಲೆ 10% ರಷ್ಟು ವಿದ್ಯುತ್ ಉಚಿತವಾಗಿ ನೀಡಲಾಗುವುದು. ಯಾರು ಎಷ್ಟು ವಿದ್ಯುತ್ ಬಳಸುತ್ತಾರೆ ಎಂಬುದನ್ನು 12 ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧರಿಸಿ, ಅದರ ಮೇಲೆ 10% ರಷ್ಟು ವಿದ್ಯುತ್ ಉಚಿತವಾಗಿ ಕೊಡಲಾಗುವುದು.
ಉದಾಹರಣೆಗೆ, 70 ಯೂನಿಟ್ ಬಳಸುವವರು ಅದಕ್ಕೆ 10% (ಅಂದರೆ ಒಟ್ಟು 80%) ಬಳಕೆ ಮಾಡಬಹುದು. ಕಳೆದ ವರ್ಷ ಸರಾಸರಿ ತಿಂಗಳಿಗೆ 100 ಯೂನಿಟ್ ಬಳಸಿದ್ದವರು ಈಗ 110 ಯೂನಿಟ್ ಬಳಸಿದ್ರೆ ವಿದ್ಯುತ್ ಉಚಿತವಾಗಿ ಸಿಗುತ್ತದೆ. ಒಂದು ವೇಳೆ 110ಕ್ಕಿಂತ ಹೆಚ್ಚು ಯೂನಿಟ್ ಬಳಸಿದ್ರೆ ಹೆಚ್ಚುವರಿ ಯೂನಿಟ್ಗೆ ಬಿಲ್ ಕಟ್ಟಬೇಕು. ಹೀಗೆ 200 ಯೂನಿಟ್ ವರೆಗೆ ವಿದ್ಯುತ್ ಬಳಸುವವರು ಬಿಲ್ ಕಟ್ಟುವಂತಿಲ್ಲ. 200 ಯೂನಿಟ್ ಉಚಿತ ಅಂತ ಎಲ್ಲರೂ ಬೇಕಾಬಿಟ್ಟಿ ವಿದ್ಯುತ್ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಜು.1 ರಿಂದ ಆಗಸ್ಟ್ ವರೆಗಿನ ಖರ್ಚಿಗೆ ಇದು ಲೆಕ್ಕ. ಜುಲೈನಿಂದ ಮಾಡಿರುವ ಖರ್ಚಿನ ಬಿಲ್ ಆಗಸ್ಟ್ನಲ್ಲಿ ಬರಲಿದೆ. ಜುಲೈವರೆಗೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡವರಿಗೆ ಸಮಯ ಕೊಡುತ್ತೇವೆ. ಹಳೇ ವಿದ್ಯುತ್ ಬಾಕಿಯನ್ನು ಗ್ರಾಹಕರೇ ಪಾವತಿಸಬೇಕು. ಆಗಸ್ಟ್ನಿಂದ ಬರುವ ಬಿಲ್ನ್ನು ಜನರು ಕಟ್ಟುವ ಅಗತ್ಯವಿಲ್ಲ ಎಂದು ಹೇಳಿದರು.