ನವದೆಹಲಿ : ಯುರೋಪ್ ಮತ್ತು ಅಮೆರಿಕದ ದೇಶಗಳಲ್ಲಿ ಮಂಕಿಪಾಕ್ಸ್ ಸೋಂಕು ಏರಿಕೆಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಜಿಲ್ಲೆಯಲ್ಲಿ ಒಂದೇ ಒಂದು ಪ್ರಕರಣ ಕಾಣಿಸಿಕೊಂಡರು ಅದನ್ನು ಸೋಂಕು ಸ್ಫೋಟ ಎಂದು ಪರಿಗಣಿಸಬೇಕು ಮತ್ತು ಈ ಕುರಿತಾಗಿ ವಿಸ್ತೃತವಾದ ತನಿಖೆ ಕೈಗೊಳ್ಳಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
ಹೊಸ ಪ್ರಕರಣಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸೋಂಕು ಕಾಣಿಸಿಕೊಂಡವರನ್ನು ಐಸೋಲೇಟ್ ಮಾಡಬೇಕು. ಅಲ್ಲದೇ ಸೋಂಕಿತರ ಸಂಪರ್ಕಕ್ಕೆ ಬಂದಿರುವವರನ್ನು ಪತ್ತೆ ಹಚ್ಚಬೇಕು.
ಸೋಂಕು ಕಾಣಿಸಿಕೊಂಡರೆ ಅದನ್ನು ಪಿಸಿಆರ್ ಪರೀಕ್ಷೆಯ ಮೂಲಕ ಖಚಿತಪಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ
ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಬೇಕು. ಈಗಾಗಲೇ ಸೋಂಕು ಕಾಣಿಸಿಕೊಂಡಿರುವ ದೇಶಗಳಿಗೆ ಕಳೆದ 21 ದಿನಗಳಲ್ಲಿ ಪ್ರಯಾಣ ಮಾಡಿರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು.
ಈ ಪ್ರಯಾಣಿಕರು ಸತ್ತಿರುವ ಅಥವಾ ಬದುಕಿರುವ ಇಲಿ, ಅಳಿಲು ಮುಂತಾದ ಪ್ರಾಣಿಗಳ ಸಂಪರ್ಕಕ್ಕೆ ಬಂದಿಲ್ಲ ಎನ್ನುವುದನ್ನೂ ಖಚಿತ ಪಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.