ಬಾಹ್ಯಾಕಾಶ ಕೇಂದ್ರದತ್ತ ಇರುವೆ, ಬೆಣ್ಣೆಹಣ್ಣುಗಳ ಸಂಚಾರ!

ಸೋಮವಾರ, 30 ಆಗಸ್ಟ್ 2021 (11:40 IST)
ಕೇಪ್ ಕನವರಾಲ್: ಇರುವೆಗಳು, ಬೆಣ್ಣೆಹಣ್ಣು, ನಿಂಬೆಹಣ್ಣು, ಐಸ್ಕ್ರೀಂ ಸೇರಿದಂತೆ ಹಲವು ವಸ್ತುಗಳನ್ನು ಹೊತ್ತ ಸ್ಪೇಸ್ ಎಕ್ಸ್ನ ರಾಕೆಟ್ವೊಂದು ರವಿವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಸಂಚಾರ ಆರಂಭಿಸಿದೆ.

ಸೋಮವಾರ ಇದು ನಿಲ್ದಾಣವನ್ನು ತಲುಪಲಿದ್ದು, ಕಳೆದ 10 ವರ್ಷಗಳಲ್ಲಿ ನಾಸಾಗೆ ಸ್ಪೇಸ್ ಎಕ್ಸ್ ಕಂಪೆನಿ ಮಾಡುತ್ತಿರುವ 23ನೇ ಡೆಲಿವರಿ ಇದಾಗಿದೆ. ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ರವಿವಾರ ಬೆಳಗ್ಗೆ ಮರುನವೀಕರಣಗೊಂಡ ಫಾಲ್ಕನ್ ರಾಕೆಟ್ ನಭಕ್ಕೆ ಚಿಮ್ಮಿತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ 7 ಮಂದಿ ಗಗನಯಾತ್ರಿಗಳಿಗೆ ನೀಡಲು ಬೆಣ್ಣೆಹಣ್ಣು, ಐಸ್ಕ್ರೀಂ ಸೇರಿದಂತೆ 2,170 ಕೆಜಿ ತೂಕದ ಸಾಮಗ್ರಿಗಳನ್ನು ಈ ಡ್ರ್ಯಾಗನ್ ಕ್ಯಾಪ್ಸ್ಯೂಲ್ ಹೊತ್ತೂಯ್ದಿದೆ.
ಅಧ್ಯಯನಕ್ಕೆಂದು ಸಾಗಣೆ: ಇದರ ಜತೆಗೆ ಇರುವೆಗಳು, ಉಪ್ಪು ನೀರಿನ ಸಿಗಡಿ ಹಾಗೂ ಸಸಿಗಳು, ಕಾಂಕ್ರೀಟ್ ಮಾದರಿ, ಸೌರ ಫಲಕಗಳು, ಹೂವಿನ ಬೀಜ ಹಾಗೂ ಇತರ ವಸ್ತುಗಳನ್ನು ಅಧ್ಯಯನಕ್ಕಾಗಿ ಒಯ್ಯಲಾಗಿದೆ. ಇಷ್ಟೇ ಅಲ್ಲದೆ, ಜಪಾನ್ನ ಸ್ಟಾರ್ಟಪ್ ಕಂಪೆನಿಯೊಂದು ತನ್ನ ಪ್ರಾಯೋಗಿಕ ರೊಬೋಟಿಕ್ ಅಂಗಾಂಗವೊಂದನ್ನೂ ಕಳುಹಿಸಿಕೊಟ್ಟಿದೆ.
ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುವ ರೊಬೋಟಿಕ್ ಮಾಡೆಲ್ಗಳು ಬಾಹ್ಯಾಕಾಶಕ್ಕೆ ತೆರಳಿ ರಿಪೇರಿ ಕೆಲಸವನ್ನೂ ಮಾಡುವಂಥ ಸಾಮರ್ಥ್ಯ ಹೊಂದಲಿವೆ ಎಂದು ಕಂಪೆನಿ ತಿಳಿಸಿದೆ. ಶನಿವಾರವೇ ಈ ರಾಕೆಟ್ ಉಡಾವಣೆ ಆಗಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಆ ಪ್ರಯತ್ನವು ವಿಫಲವಾದ ಕಾರಣ, ರವಿವಾರ ಉಡಾವಣೆ ಮಾಡಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ