ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ನೆರವು

ಗುರುವಾರ, 7 ಏಪ್ರಿಲ್ 2022 (15:15 IST)
ನವದೆಹಲಿ :  ಯುದ್ಧ ಪೀಡಿತ ಉಕ್ರೇನಿನಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಭಾರತಕ್ಕೆ ಸ್ಥಳಾಂತರಗೊಂಡಿರುವ ವಿದ್ಯಾರ್ಥಿಗಳ  ಶಿಕ್ಷಣವನ್ನು ಮುಂದುವರೆಸಲು,

ನೆರವು ನೀಡುವಂತೆ ಹಂಗೇರಿ, ರೊಮೇನಿಯಾ, ಕಜಕಿಸ್ತಾನ ಮತ್ತು ಪೋಲೆಂಡ್ ಬಳಿ ಭಾರತ  ಮಾತುಕತೆ ನಡೆಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್  ಬುಧವಾರ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಉಕ್ರೇನ್ ಪರಿಸ್ಥಿತಿ ಕುರಿತ ಚರ್ಚೆ ವೇಳೆ ಮಾತನಾಡಿದ ಅವರು ‘ಉಕ್ರೇನಿಂದ ಸ್ಥಳಾಂತರಗೊಂಡ ವೈದ್ಯ ವಿದ್ಯಾರ್ಥಿಗಳು ಹಂಗೇರಿ ವಿಶ್ವವಿದ್ಯಾಲಯಗಳಲ್ಲಿ ಕೋರ್ಸ್ ಪೂರ್ಣಗೊಳಿಸಲು ಆ ದೇಶವು ಅನುಮತಿ ನೀಡಿದೆ.

ಬೇರೆ ದೇಶಗಳೂ ಇಂಥದ್ದೇ ಪ್ರಸ್ತಾಪ ಮುಂದಿಟ್ಟಿವೆ. ಹಂಗೇರಿ, ರೊಮೇನಿಯಾ, ಕಜಕಿಸ್ತಾನ ಮತ್ತು ಪೋಲೆಂಡ್ ದೇಶಗಳಲ್ಲೂ ಉಕ್ರೇನ್ ರೀತಿಯ ಶಿಕ್ಷಣ ವ್ಯವಸ್ಥೆ ಇರುವ ಕಾರಣ ಭಾರತದ ಅತಂತ್ರ ವಿದ್ಯಾರ್ಥಿಗಳಿಗೆ ನೆರವು ನೀಡುವಂತೆ ಭಾರತ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ , ವೈದ್ಯ ಪದವಿಯ ಪ್ರಮುಖ 2 ಪರೀಕ್ಷೆಗಳನ್ನು ಬರೆಯುವುದರಿಂದ ಉಕ್ರೇನ್ ಸರ್ಕಾರ ಕೂಡಾ ವಿನಾಯಿತಿ ನೀಡಿದೆ. ಜೊತೆಗೆ ಮೂರರಿಂದ ನಾಲ್ಕನೇ ವರ್ಷಕ್ಕೆ ಬಡ್ತಿ ನೀಡುವುದರಲ್ಲೂ ಕೆಲವೊಂದು ವಿನಾಯ್ತಿ ಪ್ರಕಟಿಸಿದೆ. 6ನೇ ವರ್ಷದ ವಿದ್ಯಾರ್ಥಿಗಳಿಗೆ ಕಡ್ಡಾಯ ಸಿಆರ್ಒಸಿ ಪರೀಕ್ಷೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ