ಮುಂದಿನ ದಸರಾ ಹಬ್ಬಕ್ಕೆ ಬೆಂಗಳೂರು ಮೈಸೂರು ರಸ್ತೆ ಲೋಕಾರ್ಪಣೆ

ಶನಿವಾರ, 14 ಆಗಸ್ಟ್ 2021 (10:12 IST)
ನವದೆಹಲಿ(ಆ.14): ದೇಶದಲ್ಲಿ ಅತ್ಯುತ್ತಮ ದರ್ಜೆಯ ಹಾಗೂ ಅತ್ಯಂತ ವೇಗವಾಗಿ ರಸ್ತೆ ನಿರ್ಮಾಣ ಕೆಲಸಗಳು ನಡೆಯುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಕುರಿತು ಅತೀವ ಮುತುವರ್ಜಿ ವಹಿಸಿ ಕೆಲ ನಿರ್ವಹಿಸುತ್ತಿದ್ದಾರೆ. ಇದೀಗ ಗಡ್ಕರಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ರಸ್ತೆ ಕುರಿತು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಬರೋಬ್ಬರಿ 8,172 ಕೋಟಿ ರೂಪಾಯಿ ವೆಚ್ಚದ ಈ ರಸ್ತೆ ಪ್ರಯಾಣದ ಸಮಯವನ್ನು ಅರ್ಧಕ್ಕೆ ಇಳಿಸಲಿದೆ.

ನಿತಿನ್ ಗಡ್ಕರಿ ಟ್ವೀಟ್ ಮೂಲಕ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ರಸ್ತೆ ಕಾಮಾಗಾರಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 10 ಲೇನ್ ಬೆಂಗಳೂರು ಮೈಸೂರು ಎಕಾನಾಮಿಕ್ ಕಾರಿಡಾರ್ ಅತ್ಯಂತ ವೇಗದಲ್ಲಿ ನಿರ್ಮಾಣವಾಗುತ್ತಿದೆ. 2022 ಅಕ್ಟೋಬರ್ ತಿಂಗಳಲ್ಲಿ ಈ ರಸ್ತೆ ಕಾಮಾಗಾರಿ ಪೂರ್ಣಗೊಳ್ಳಲಿದೆ. ಈ ರಸ್ತೆಯಿಂದ ಎರಡು ನಗರಗಳ ಪ್ರಯಾಣ ಸಮಯ 3 ಗಂಟೆಯಿಂದ ಕೇವಲ 90 ನಿಮಿಷಕ್ಕೆ ಇಳಿಯಲಿದೆ ಎಂದು ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ. ಈ ಸಂತಸ ವಿಚಾರನ್ನು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
 ಗಡ್ಕರಿ ಹೇಳಿದಂತೆ ಮುಂದಿನ ವರ್ಷದ ಅಕ್ಟೋಬರ್ ತಿಂಗಳಲ್ಲಿ ರಸ್ತೆ ಕಾಮಾಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ವರ್ಷದ ದಸರಾ ಹಬ್ಬಕ್ಕೆ ನೂತನ ರಸ್ತೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ. ಕೊರೋನಾ ಕಾರಣ ಕಾಮಾಗಾರಿ ಕೊಂಚ ವಿಳಂಬವಾಗಿದೆ ಎಂದು ಗಡ್ಕರಿ ಈ ಮೊದಲು ಹೇಳಿದ್ದರು.
 ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ರಸ್ತೆಯಲ್ಲಿ ಹಲವು ವಿಶೇಷತೆಗಳಿವೆ. 117 ಕಿ.ಮೀ ಉದ್ದದ ಈ ರಸ್ತೆ ಕಾಮಾಗಾರಿಗೆ 8,172 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಅತ್ಯಾಧುನಿಕ ಹಾಗೂ ಅಂತಾರಾಷ್ಟ್ರೀಯ ದರ್ಜೆಯ ರಸ್ತೆ ಇದಾಗಿದೆ. ಬೆಂಗಳೂರು ಮೈಸೂರು ರಸ್ತೆ ನಡುವೆ 3 ಫ್ಲೈ ಓವರ್ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನ ಹೊರಭಾಗ, ಮದ್ದೂರು ಹಾಗೂ ಶ್ರೀರಂಗಪಟ್ಟಣದಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಲಾಗಿದ್ದು, ಸರಾಗ ಪ್ರಯಾಣಕ್ಕೆ ಅನೂಕೂಲ ಮಾಡಲಾಗಿದೆ.
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ರಸ್ತೆ ಕಾಮಾಗಾರಿಯನ್ನು ಎರಡು ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತವನ್ನು ಮೇ 2019ರಲ್ಲಿ ಆರಂಭಿಸಲಾಗಿದೆ. ಬೆಂಗಳೂರಿನಿಂದ ಮದ್ದೂರಿನ ಬಳಿಯ ನಿಡಘಟ್ಟ ವರೆಗಿನ 56 ಕಿ.ಮೀ ಉದ್ದದ ರಸ್ತೆ ಕಾಮಾಗಾರಿ ಮೊದಲ ಹಂತದಲ್ಲಿ ಆರಂಭಗೊಂಡಿದೆ.
ಎರಡನೇ ಹಂತವನ್ನು 2019ರ ಡಿಸೆಂಬರ್ ತಿಂಗಳಲ್ಲಿ ಆರಂಭಿಸಲಾಗಿದೆ. ಎರಡನೇ ಹಂತದ ನಿಡಘಟ್ಟದಿಂದ ಮೈಸೂರು ವರೆಗಿನ 61 ಕಿ.ಮೀ ಉದ್ದದ ರಸ್ತೆ ಕಾಮಾಗಾರಿ ಭರದಿಂದ ಸಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ