ಪ್ರಧಾನಿ ಮೋದಿ, ಸಿಎಂ ಯೋಗಿಗೆ ಮತದಾರರಿಂದ ತಕ್ಕ ಪಾಠ : ರಾಹುಲ್ ಗಾಂಧಿ

ಬುಧವಾರ, 14 ಮಾರ್ಚ್ 2018 (19:27 IST)
ಉತ್ತರ ಪ್ರದೇಶ ಮತ್ತು ಬಿಹಾರ್ ರಾಜ್ಯಗಳ ಉಪಚುನಾವಣೆ ಫಲಿತಾಂಶ ಮತದಾರರು ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ ಎನ್ನುವುದು ಸಾಬೀತುಪಡಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶ ಮತ್ತು ಬಿಹಾರ್ ರಾಜ್ಯಗಳ ಉಪಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳನ್ನು ಅಭಿನಂದಿಸಿದ ರಾಹುಲ್, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಒಂದೇ ರಾತ್ರಿಯಲ್ಲಿ ಸಧೃಡವಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
 
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ತವರು ಕ್ಷೇತ್ರವಾದ ಗೋರಖ್‌ಪುರ್ ಮತ್ತು ಫುಲ್ಪುರ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳು ಹೀನಾಯ ಸೋಲನುಭವಿಸಿದ್ದು ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.
 
ಗೋರಖ್‌ಪುರ್ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಪ್ರವೀಣ್ ನಿಶಾದ್ ತಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿ ಉಪೇಂದ್ರ ದತ್ತ ಶುಕ್ಲಾರನ್ನು ಭಾರಿ ಮತಗಳ ಅಂತರದಿಂದ ಸೋಲಿಸಿದರು. 
 
ಯುಪಿ, ಬಿಹಾರ್ ಉಪಚುನಾವಣೆ ಫಲಿತಾಂಶದಿಂದ ಮತದಾರರು ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎನ್ನುವುದು ಸಾಬೀತಾಗಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಿರುಗೇಟು ನೀಡಿದ್ದಾರೆ.  
 
ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಕೇವಲ ಭರವಸೆಗಳನ್ನು ನೀಡುತ್ತಾರೆ. ಆದರೆ, ಯಾವುದೇ ಭರವಸೆಯನ್ನು ಈಡೇರಿಸಲ್ಲ. ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು,
 
ಕಳೆದ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತರಪ್ರದೇಶದ 80 ಲೋಕಸಭೆ ಕ್ಷೇತ್ರಗಳಲ್ಲಿ 71 ರಲ್ಲಿ ಜಯಭೇರಿ ಬಾರಿಸಿತ್ತು.
 
ಮತ್ತೊಂದೆಡೆ ಬಿಹಾರ್‌ನಲ್ಲಿ ಅರಾರಿಯಾ ಲೋಕಸಭೆ ಕ್ಷೇತ್ರ ಮತ್ತು ಜಹಾನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಲಾಲು ಯಾದವ್ ನೇತೃತ್ವದ ಆರ್‌ಜೆಡಿ ಪಕ್ಷ ಜಯಭೇರಿ ಬಾರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ