ಇಂದು ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್ ನೋಡೋಕೆ ಹೀಗೆ ಮಾಡಿ

ಸೋಮವಾರ, 20 ಸೆಪ್ಟಂಬರ್ 2021 (11:39 IST)
ಬೆಂಗಳೂರು(ಸೆ.20) : 2021-22ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವು ಇಂದು (ಸೆಪ್ಟೆಂಬರ್ 20) ಪ್ರಕಟವಾಗಲಿದೆ. ಹಾಗೆಯೇ ಕೌನ್ಸೆಲಿಂಗ್  ಪ್ರಕ್ರಿಯೆಯು ಅಕ್ಟೋಬರ್ನಿಂದ ಪ್ರಾರಂಭವಾಗಲಿದೆ.

ಈ ವರ್ಷ ಒಟ್ಟು 2,01,834 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು. 1.89 ಲಕ್ಷ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದಿದ್ದು, ಶೇ.92.90% ಹಾಜರಾತಿ ದಾಖಲಾಗಿದೆ. ಅದೇ ರೀತಿ 1.62 ಲಕ್ಷ ವಿದ್ಯಾರ್ಥಿಗಳು ಜೀವಶಾಸ್ತ್ರ ಪರೀಕ್ಷೆ ಬರೆದಿದ್ದು ಶೇ.80.48% ಹಾಜರಾತಿ ದಾಖಲಾಗಿದೆ. 1.93 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದು ಶೇ.95.88% ಹಾಜರಾತಿ ದಾಖಲಾಗಿದೆ. 1.93 ಲಕ್ಷ ವಿದ್ಯಾರ್ಥಿಗಳು ಭೌತಶಾಸ್ತ್ರ ಪರೀಕ್ಷೆ ಬರೆದಿದ್ದು ಶೇ.95.91% ಹಾಜರಾತಿ ದಾಖಲಾಗಿದೆ.
ಆಗಸ್ಟ್ 28, 29 ಮತ್ತು 30ರಂದು ಸಿಇಟಿ ಪರೀಕ್ಷೆ ನಡೆದಿತ್ತು. ಇಂಜಿನಿಯರಿಂಗ್, ಯೋಗಾ, ನ್ಯಾಚುರೋಪತಿ, ಬಿಫಾರ್ಮ್, ಫಾರ್ಮಾ ಡಿ, ವೆಟರ್ನರಿ ಮತ್ತು ಫಾರ್ಮ್ ಸೈನ್ ಕೋರ್ಸ್ ಗಳಿಗೆ ಸಿಇಟಿ ಪರೀಕ್ಷೆಯನ್ನು ನಡೆಸಲಾಗಿತ್ತು. ಇಂದು ಮಧ್ಯಾಹ್ನ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬಳಿಕ ಸಿಇಟಿ ಫಲಿತಾಂಶ ಪ್ರಕಟವಾಗಲಿದೆ. ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಯಲಿದೆ. ಸುದ್ದಿಗೋಷ್ಠಿ ಬಳಿಕ 2020-21ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್ ಸೈಟ್ನಲ್ಲಿ ಫಲಿತಾಂಶ ಲಭ್ಯವಾಗಲಿದೆ. kea.kar.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಇಂದು ಸಂಜೆ 4 ಗಂಟೆಗೆ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.
Career Options: NEET ಪರೀಕ್ಷೆ ಬಳಿಕ ವೃತ್ತಿಪರ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಿ..!
ಪ್ರಸಕ್ತ ವರ್ಷದಲ್ಲಿ ಫಲಿತಾಂಶ ನೀಡುವುದೂ ಸೇರಿ ನಿಗದಿತ ವೇಳಾಪಟ್ಟಿಯಂತೆ ಕೌನ್ಸಿಲಿಂಗ್ ಮುಗಿಸಲಾಗುವುದು. ಯಾವುದೇ ಕಾರಣಕ್ಕೂ ಶೈಕ್ಷಣಿಕ ವರ್ಷ ಹಳಿತಪ್ಪಲು ಬಿಡುವುದಿಲ್ಲ. ಜೊತೆಗೆ ಪದವಿ ಪದವಿ ಪ್ರವೇಶಕ್ಕೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ ಎಂದು ಈ ಹಿಂದೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದ್ದರು.
ರಾಜ್ಯದಲ್ಲಿ ಈ ವರ್ಷ ಕೋವಿಡ್ ಕಾರಣದಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಅಲ್ಲದೇ ಎಲ್ಲಾ ವಿದ್ಯಾರ್ಥಿಗಳನ್ನು ಯಾವುದೇ ಪರೀಕ್ಷೆ ಇಲ್ಲದೇ ಪಾಸು ಮಾಡಿದೆ. ಆದರೆ ಆಗಸ್ಟ್ 28, 29 ಹಾಗೂ 30ರಂದು ರಾಜ್ಯಾದ್ಯಂತ 530 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಯನ್ನು ನಡೆಸಲಾಗಿತ್ತು. 530 ಕೇಂದ್ರಗಳ ಪೈಕಿ 86 ಕೇಂದ್ರಗಳು ಬೆಂಗಳೂರಿನಲ್ಲಿದ್ದವು. ಉಳಿದ ಜಿಲ್ಲೆಗಳಲ್ಲಿ ಒಟ್ಟು 444 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಯನ್ನು ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ನಡೆಸಲಾಗಿತ್ತು.
ರಾಜ್ಯದಲ್ಲಿ ಒಟ್ಟು 2,01,816 ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಾಯಿಸಿದ್ದರು, ಅವರಲ್ಲಿ ಭೌತಶಾಸ್ತ್ರಕ್ಕೆ 1,93,588 ಮತ್ತು ರಸಾಯನಶಾಸ್ತ್ರಕ್ಕೆ 1,93,522 ಹಾಜರಾಗಿದ್ದರು. ಆ ಪೈಕಿ ಕೋವಿಡ್ ಪಾಸಿಟಿವ್ ಇರುವ 12 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 12 ಸೋಂಕಿತ ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳಲ್ಲಿ ಬೆಂಗಳೂರಿನಲ್ಲಿ ಹಾಗೂ ಕೋಲಾರ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ತಲಾ ಒಬ್ಬ ವಿದ್ಯಾರ್ಥಿ ಸಿಇಟಿ ಬರೆದಿದ್ದರು. ಆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಸಿಇಟಿ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳ ರ್ಯಾಂಕ್ ನಿರ್ಧಾರ ಮಾಡಲಾಗುವುದು ಎಂದು ಸಚಿವರು ಈಗಾಗಲೇ ತಿಳಿಸಿದ್ದಾರೆ. ಇಂಜಿನಿಯರಿಂಗ್ ಶುಲ್ಕ ಹೆಚ್ಚಳದ ಕುರಿತು ಅತೀ ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದೂ ಸಹ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ