ಸಚಿವರ ಗೈರಿಗೆ ಸಭಾಪತಿಗಳು ಗರಂ!

ಬುಧವಾರ, 9 ಮಾರ್ಚ್ 2022 (15:42 IST)
ಬೆಂಗಳೂರು : ವಿಧಾನ ಪರಿಷತ್ ಕಲಾಪದ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರ ಗೈರಿನ ಬಗ್ಗೆ ಇವತ್ತು ಕೂಡಾ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಆಕ್ರೋಶಗೊಂಡ ಸಭಾಪತಿಗಳು ಇದೇನು ಬೀಗರ ಮನೆಯಾ ಎಂದು ಸಭಾನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ವಿಧಾನ ಪರಿಷತ್ ಕಲಾಪದಲ್ಲಿ ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ಶೂನ್ಯವೇಳೆ ಕೈಗೆತ್ತಿಕೊಳ್ಳುವ ಮುನ್ನ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವ ಸಚಿವರ ಹೆಸರುಗಳನ್ನು ಸಭಾಪತಿಗಳು ಓದಿ ಹೇಳಿದರು.

ಆದರೆ ಸಚಿವರಾದ ಅಶ್ವತ್ಥನಾರಾಯಣ, ಸುಧಾಕರ್, ನಾಗೇಶ್, ಸುನೀಲ್ ಕುಮಾರ್ ಸದನಕ್ಕೆ ಗೈರಾಗಿದ್ದರು. ಕೇವಲ ಓರ್ವ ಸಚಿವರು ಮಾತ್ರ ಹಾಜರಿದ್ದರು. ಸಚಿವರ ಗೈರಿಗೆ ಸಭಾಪತಿ ಗರಂ ಆಗಿದ್ದು, ಆಗ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಶೂನ್ಯವೇಳೆ ಆರಂಭಿಸಿ 10 ನಿಮಿಷದಲ್ಲಿ ಸಚಿವರು ಬರುತ್ತಾರೆ ಎಂದರು.  

ಸಭಾನಾಯಕರ ಹೇಳಿಕೆಗೆ ಕೆಂಡಾಮಂಡಲರಾದ ಸಭಾಪತಿಗಳು ಇದೇನು ಬೀಗರ ಮನೆಯಾ? ಎಂದು ಗರಂ ಆಗಿದ್ದಾರೆ. ನಾಳೆಯಿಂದ ಕಡ್ಡಾಯ ಹಾಜರಿರುವ ಸಚಿವರು ಎನ್ನುವುದನ್ನೇ ತೆಗೆದುಬಿಡಿ ಎಂದು ಕಿಡಿಕಾರಿದರು. ದಿನಾ ಇದೇ ರೀತಿ ಸಚಿವರು ಗೈರಾದರೆ ಸದನ ನಡೆಸೋದು ಹೇಗೆ? ಇನ್ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಸಭಾಪತಿಗಳು ಸೂಚನೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ