1960ರಲ್ಲಿ ಚೀನಾ ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಕ್ಷಾಮ ಉಂಟಾಗಿ ಜನಸಂಖ್ಯೆ ಕುಸಿದಿತ್ತು.
ಗ್ರೇಟ್ ಲೀಪ್ ಫಾರ್ವರ್ಡ್ ಎಂದು ಕರೆಯಲ್ಪಡುವ ಮಾವೋ ಝೆಡಾಂಗ್ ಅವರ ವಿನಾಶಕಾರಿ ಕೃಷಿ ನೀತಿಯಿಂದ ಉಂಟಾದ ಅತ್ಯಂತ ಭೀಕರ ಕ್ಷಾಮದಿಂದ ಚೀನಾದ ಜನಸಂಖ್ಯೆಯು ಭಾರಿ ಪ್ರಮಾಣದಲ್ಲಿ ಕುಸಿದಿತ್ತು.
ಅದಾದ ಬಳಿಕ ಈಗ ಮತ್ತೆ ಜನಸಂಖ್ಯೆಯಲ್ಲಿ ಕುಸಿತ ಕಂಡಿದೆ. ಚೀನಾದ ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋದ ಮುಖ್ಯಸ್ಥ ಕಾಂಗ್ ಯಿ, “ಒಟ್ಟಾರೆ ಕಾರ್ಮಿಕ ಪೂರೈಕೆಯು ಬೇಡಿಕೆಗಿಂತ ಹೆಚ್ಚಿದೆ. ಹೀಗಾಗಿ ಜನರು ಜನಸಂಖ್ಯೆಯ ಕುಸಿತದ ಬಗ್ಗೆ ಚಿಂತಿಸಬಾರದು” ಎಂದು ತಿಳಿಸಿದ್ದಾರೆ. ಕಳೆದ ವರ್ಷ ಚೀನಾದ ಜನನ ಪ್ರಮಾಣವು 1,000 ಜನರಿಗೆ 6.77 ಜನನಗಳಾಗಿದ್ದು, 2021 ರಲ್ಲಿ 7.52 ಜನನಗಳಾಗಿತ್ತು.
ಮಗು ನೀತಿ ಎಫೆಕ್ಟ್
ಚೀನಾದಲ್ಲಿ ಜನಸಂಖ್ಯೆ ಕುಸಿತಕ್ಕೆ ಒಂದು ಕಾರಣವಿದೆ. 1980 ಮತ್ತು 2015 ರ ನಡುವೆ ಹೇರಲಾದ ಒಂದು ಮಗುವಿನ ನೀತಿ. ದಂಪತಿ ಹೊಂದಬಹುದಾದ ಮಕ್ಕಳ ಸಂಖ್ಯೆಯನ್ನು ಒಂದಕ್ಕೆ ಸೀಮಿತಗೊಳಿಸಲಾಗಿತ್ತು.
ಈ ನೀತಿಯು ಸುಮಾರು 400 ಮಿಲಿಯನ್ (40 ಕೋಟಿ) ಮಕ್ಕಳ ಜನನ ನಿಯಂತ್ರಣಕ್ಕೆ ಸಹಾಯ ಮಾಡಿತ್ತು ಎಂದು ಚೀನಾ ಹೇಳಿದೆ.