ಮಕ್ಕಳಿಗೆ ಕೊರೋನಾ ಲಸಿಕೆ; 2022ರ ಆರಂಭದಲ್ಲಿ Covovax ಲಭ್ಯ ಎಂದ ಸೀರಂ ಸಂಸ್ಥೆ

ಶನಿವಾರ, 7 ಆಗಸ್ಟ್ 2021 (09:00 IST)
ನವದೆಹಲಿ: ಕೋವಿಶೀಲ್ಡ್ ಲಸಿಕೆಯನ್ನ ಉತ್ಪಾದಿಸುತ್ತಿರುವ ಭಾರತದ ಸೀರಂ ಇನ್ಸ್ಟಿಟ್ಯೂಟ್ ಸಂಸ್ಥೆ ಇದೀಗ ಮತ್ತೊಂದು ಲಸಿಕೆಯ ಉತ್ಪಾದನೆ ನಡೆಸುತ್ತಿದೆ. ಅಮೆರಿಕದ ನೋವಾವ್ಯಾಕ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವೋವ್ಯಾಕ್ಸ್ (Covovax) ಲಸಿಕೆಯನ್ನ ಉತ್ಪಾದಿಸುತ್ತಿದೆ. ಈ ಲಸಿಕೆಯ ತುರ್ತು ಬಳಕೆಗೆ ಭಾರತದ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯಿಂದ ಅನುಮತಿಗಾಗಿ ಅರ್ಜಿ ಹಾಕಿದೆ. ಕೋವಾವ್ಯಾಕ್ಸ್ ಲಸಿಕೆ ಮಕ್ಕಳಿಗೆ ಹಾಗೂ ದೊಡ್ಡವರಿಗೆ ಪ್ರತ್ಯೇಕವಾಗಿದೆ.

ವಯಸ್ಕರಿಗೆ, ಅಂದರೆ 18 ವರ್ಷ ಮೇಲ್ಪಟ್ಟವರಿಗೆ ಹಾಕಬಹುದಾದ ಕೋವಾವ್ಯಾಕ್ಸ್ ಲಸಿಕೆ ಇನ್ನೆರಡು ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಅಕ್ಟೋಬರ್ ತಿಂಗಳಲ್ಲಿ ಇದು ಬಿಡುಗಡೆಯಾಗುತ್ತದೆ ಎಂದು ಸೀರಂ ಸಂಸ್ಥೆಯ ಸಿಇಒ ಅದಾರ್ ಪೂನವಾಲ ಹೇಳಿದ್ಧಾರೆ. ಇನ್ನು, 2 ವರ್ಷ ಮೇಲ್ಪಟ್ಟ ವಯಸ್ಸಿನ ಮಕ್ಕಳಿಗೆ ಅಭಿವೃದ್ಧಿಪಡಿಸಲಾಗುತ್ತಿರುವ ಇದೇ ಲಸಿಕೆಯು 2022ರ ಮೊದಲ ತ್ರೈಮಾಸಿಕ ಅವಧಿಯೊಳಗೆ ಉತ್ಪಾದನೆಯಾಗಲಿದೆ ಎಂದು ಸೀರಂ ಸಂಸ್ಥೆ ಹೇಳಿದೆ.
ಮಕ್ಕಳಿಗೆ ಅಭಿವೃದ್ಧಿಪಡಿಸಲಾಗಿರುವ ಕೋವಾವ್ಯಾಕ್ಸ್ ಲಸಿಕೆಗೆ ಭಾರತದಲ್ಲಿ ಇನ್ನೂ ಪ್ರಯೋಗ ನಡೆಯಬೇಕಿದೆ. ಇದೇ ತಿಂಗಳು ಮಕ್ಕಳಲ್ಲಿ ಕ್ಲಿನಿಕಲ್ ಟ್ರಯಲ್ ಆರಂಭಗೊಳ್ಳಲಿದೆ. ಒಟ್ಟು 10 ಸ್ಥಳಗಳಲ್ಲಿ 920 ಮಕ್ಕಳಲ್ಲಿ ಇದರ ಪ್ರಯೋಗ ನಡೆಯಲಿದೆ. 12ರಿಂದ 17 ವರ್ಷ ವಯಸ್ಸಿನ ಹಾಗೂ 2ರಿಂದ 11 ವರ್ಷ ವಯಸ್ಸಿನ ಮಕ್ಕಳು ಈ ಪ್ರಯೋಗದಲ್ಲಿ ಭಾಗಿಯಾಗಲಿದ್ದಾರೆನ್ನಲಾಗಿದೆ. ಕಳೆದ ತಿಂಗಳಷ್ಟೇ ಕೋವೊವ್ಯಾಕ್ಸ್ ಲಸಿಕೆಯನ್ನ ಮಕ್ಕಳ ಮೇಲೆ ಪರೀಕ್ಷಿಸಲು ಕೆಲ ಷರತ್ತುಗಳ ಆಧಾರದಲ್ಲಿ ಔಷಧ ಪ್ರಾಧಿಕಾರವು ಸಿಐಐಗೆ ಅನುಮತಿ ನೀಡಿತ್ತು. ಕೆಲ ವರದಿಗಳ ಪ್ರಕಾರ ನೋವವ್ಯಾಕ್ಸ್ ಸಂಸ್ಥೆಯ ಈ ಕೋವೊವ್ಯಾಕ್ಸ್ ಲಸಿಕೆ ಶೇ. 90ರಷ್ಟು ಪರಿಣಾಮಕಾರಿ ಆಗಿದೆ. ಆದರೆ ಇನ್ನೂ ಕೂಡ ಯಾವ ದೇಶದಲ್ಲೂ ಇದರ ಸಾರ್ವಜನಿಕ ಬಳಕೆ ಆಗಿಲ್ಲ. ಭಾರತದಲ್ಲಿ ಇದರ ತುರ್ತು ಬಳಕೆಗೆ ಕೋರಿಕೆ ಸಲ್ಲಿಸಿದೆಯಾದರೂ ಇದರ ಪ್ರಯೋಗದ ವಿವರಗಳನ್ನ ಪರಿಶೀಲಿಸಿದ ಬಳಿಕವಷ್ಟೇ ಸರ್ಕಾರ ಅನುಮತಿ ನೀಡುತ್ತದೆ. ಇದೇ ವೇಳೆ, ಭಾರತದ ಭಾರತ್ ಬಯೋಟೆಕ್ ಮತ್ತು ಝೈಡಸ್ ಕೆಡಿಲಾ ಸಂಸ್ಥೆಗಳೂ ಕೂಡ ಈಗಾಗಲೇ ತಮ್ಮ ಕೋವ್ಯಾಕ್ಸಿನ್ (Covaxin) ಮತ್ತು ಝೈಕೋವ್-ಡಿ (ZyCoVi-D) ಲಸಿಕೆಗಳನ್ನ ಮಕ್ಕಳ ಮೇಲೆ ಪರೀಕ್ಷಿಸಲು ಅರಂಭಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ