ಯುದ್ಧ ಯಾರಿಗೂ ಬೇಕಾಗಿಲ್ಲ ಎಂಬುದನ್ನು ಪುಟಿನ್ಗೆ ಅರ್ಥ ಮಾಡಿಸಿ ಎಂದ ಕುಲೆಬಾ
ಭಾನುವಾರ, 6 ಮಾರ್ಚ್ 2022 (12:33 IST)
ರಷ್ಯಾ-ಉಕ್ರೇನ್ ಯುದ್ಧ ಶುರುವಾಗಿ ಎರಡು ವಾರ ಸಮೀಪಿಸುತ್ತಿದೆ. ಯುದ್ಧ ನಿಲ್ಲಲಿ ಎಂಬುದು ಅನೇಕರ ಪ್ರಾರ್ಥನೆ. ವಿಶ್ವದ ಹಲವು ರಾಷ್ಟ್ರಗಳ ಒತ್ತಾಯ.
ಏನೇ ಆದರೂ ಯುದ್ಧ ನಿಲ್ಲಿಸುವುದು ರಷ್ಯಾ ಅಧ್ಯಕ್ಷ ಪುಟಿನ್ ಕೈಯಲ್ಲೇ ಇದೆ ಎಂಬುದು ಪ್ರತಿಯೊಬ್ಬರಿಗೂ ಅರ್ಥವಾದ ಸತ್ಯ. ಈ ಮಧ್ಯೆ, ಹೇಗಾದರೂ ಸರಿ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ.
ಆ ಸಾಲಿಗೆ ಈಗ ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೋ ಕುಲೆಬಾ ಸೇರ್ಪಡೆಯಾಗಿದ್ದಾರೆ. ಪುಟಿನ್ ಅವರಿಗೆ ಹೇಗಾದರೂ ಅರ್ಥ ಮಾಡಿಸಿ, ಈ ಯುದ್ಧ ಎಲ್ಲರ ಹಿತಾಸಕ್ತಿಗೆ ವಿರುದ್ದವಾಗಿ ನಡೆಯುತ್ತಿದೆ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಿ ಎಂದು ಹೇಳಿದ್ದಾರೆ.
ದೂರದರ್ಶನದ ಮೂಲಕ ಭಾಷಣ ಮಾಡಿದ ಅವರು, ಪ್ರಧಾನಿ ಮೋದಿಗೆ ಮಾತ್ರವಲ್ಲದೆ ಇಡೀ ಭಾರತೀಯರಿಗೆ ಈ ನನ್ನ ಸಂದೇಶ ಎಂದೂ ಹೇಳಿದ್ದಾರೆ. ಹಾಗೇ, ಉಳಿದ ಕೆಲವು ದೇಶಗಳನ್ನೂ ಉಲ್ಲೇಖಿಸಿದ್ದಾರೆ.
ಇನ್ನು ರಷ್ಯಾ ಅಧ್ಯಕ್ಷನೊಂದಿಗೆ ಉತ್ತಮ ಸಂಬಂಧಹೊಂದಿರುವ ಭಾರತ, ಚೀನಾ, ನೈಜೀರಿಯಾ ಸೇರಿ ಇನ್ನಿತರ ರಾಷ್ಟ್ರಗಳಿಗೆ ಯುದ್ಧ ನಿಲ್ಲಿಸಲು ಸಹಾಯ ಮಾಡುವಂತೆ ಕೇಳಿಕೊಂಡಿರುವ ಉಕ್ರೇನ್ ಸಚಿವ ಕುಲೆಬಾ, ರಷ್ಯಾ ಮೇಲಿನ ನಿರ್ಬಂಧಗಳನ್ನು ಹೆಚ್ಚಿಸಿ.
ಆ ದೇಶ ಯುದ್ಧದ ನಿಯಮ ಉಲ್ಲಂಘಿಸುತ್ತಿದೆ. ಈಗ ಕದನ ವಿರಾಮವನ್ನೂ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದಾರೆ. ಉಕ್ರೇನ್ನಲ್ಲಿರುವ ಇತರ ದೇಶಗಳ ನಾಗರಿಕರು, ನಮ್ಮ ನಾಗರಿಕರನ್ನು ಇಲ್ಲಿಂದ ಸ್ಥಳಾಂತರ ಮಾಡಲು ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದ್ದಾರೆ.