ರತನ್ ಟಾಟಾ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಗುರುವಾರ, 31 ಮಾರ್ಚ್ 2022 (15:25 IST)
ನವದೆಹಲಿ : ಖ್ಯಾತ ಉದ್ಯಮಿ ರತನ್ ಟಾಟಾ ಅವರಿಗೆ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ.

ಒಬ್ಬ ವ್ಯಕ್ತಿಗೆ ಅತ್ಯುನ್ನತ ನಾಗರಿಕ ಗೌರವ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವುದು ನ್ಯಾಯಾಲಯಕ್ಕೆ ಸಂಬಂಧಿಸಿದ್ದಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ. 

ಇದು ಯಾವ ರೀತಿಯ ಮನವಿ? ಭಾರತ ರತ್ನ ನೀಡುವಂತೆ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಲು ಸಾಧ್ಯವೆ ಎಂದು ಪೀಠ ಪ್ರಶ್ನಿಸಿದೆ.

ಅರ್ಜಿದಾರರ ಪರ ವಕೀಲರು, ಕನಿಷ್ಠ ಪಕ್ಷ ಸರ್ಕಾರಕ್ಕೆ ಮನವಿ ಮಾಡಬಹುದು ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ, ಹೋಗಿ ವಿನಂತಿಯನ್ನು ಮಾಡಿ. ನ್ಯಾಯಾಲಯದ ಮೆಟ್ಟಿಲೇರುವ ಪ್ರಶ್ನೆ ಎಲ್ಲಿದೆ ಎಂದು ತಿಳಿಸಿದ್ದಾರೆ. 

ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸುವುದಾಗಿ ಹೇಳಿದ ನಂತರ ಅರ್ಜಿದಾರರ ಪರ ವಕೀಲರು ಅರ್ಜಿಯನ್ನು ಹಿಂತೆಗೆದುಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ