ರಾಜ್ಯದಲ್ಲಿ ಕೊರೊನಾ ಬೆನ್ನಲ್ಲೇ ಏರಿಕೆ ಆಯ್ತು ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣಗಳು!
ಶುಕ್ರವಾರ, 24 ಸೆಪ್ಟಂಬರ್ 2021 (11:40 IST)
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ಡೆಂಗಿ ಪ್ರಕರಣಗಳ ಹೆಚ್ಚಳವಾಗುತ್ತಿದ್ದು, ಕಳೆದ ಎರಡು ತಿಂಗಳಲ್ಲಿ 1,777 ಡೆಂಗಿ ಪ್ರಕರಣಗಳು ದೃಢಪಟ್ಟಿವೆ.
ರಾಜ್ಯದಲ್ಲಿ ಈ ವರ್ಷದ ಮೊದಲ 7 ತಿಂಗಳ ಅವಧಿಯಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ 1,500 ಇತ್ತು. ಆದರೆ ಕಳೆದ 2 ತಿಂಗಳ ಬಳಿಕ ಡೆಂಗಿ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿದ್ದು, ಈವರೆಗೆ ಒಟ್ಟುಉ 3,279 ಡೆಂಗಿ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 575 ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಕಲಬುರಗಿಯಲ್ಲಿ 313, ಉಡುಪಿಯಲ್ಲಿ 312, ಶಿವಮೊಗ್ಗದಲ್ಲಿ 235, ದಕ್ಷಿಣ ಕನ್ನಡದಲ್ಲಿ 190, ಕೊಪ್ಪಳದಲ್ಲಿ 160, ಬಳ್ಳಾರಿಯಲ್ಲಿ 145, ದಾವಣಗೆರೆಯಲ್ಲಿ 138, ಹಾವೇರಿಯಲ್ಲಿ 125, ಗದಗದಲ್ಲಿ 116 ಹಾಗೂ ವಿಜಯಪುರದಲ್ಲಿ 114 ಮಂದಿಗೆ ಡೆಂಗಿ ಜ್ವರ ಕಾಣಿಸಿಕೊಂಡಿದೆ.
ರಾಜ್ಯದಲ್ಲಿ ಈವರೆಗೆ 1,042 ಚಿಕೂನ್ ಗುನ್ಯಾ ಪ್ರಕರಣಗಳು ದೃಢಪಟ್ಟಿವೆ. ಎರಡು ತಿಂಗಳಲ್ಲಿ 534 ಮಂದಿ ಈ ಜ್ವರಕ್ಕೆ ಒಳಗಾಗಿದ್ದಾರೆ. ಕಲಬುರ್ಗಿ 143, ಕೋಲಾರ 108 ಹಾಗೂ ಶಿವಮೊಗ್ಗದಲ್ಲಿ 106 ಅಧಿಕ ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ರ ಗಡಿಯೊಳಗಡೆ ಇವೆ.