ಬೆಂಗಳೂರು : ಈ ಬಾರಿ ದೀಪಾವಳಿ ಹಬ್ಬಕ್ಕೆ ಪಟಾಕಿ ವ್ಯಾಪಾರ ಕಳೆಗುಂದಿದೆ. ಹಬ್ಬ ಸಮೀಪಿಸಿದರೂ ಗ್ರಾಹಕರು ಪಟಾಕಿ ಮಳಿಗೆಗಳತ್ತ ಸುಳಿಯಲು ಹಿಂದೆ ಮುಂದೆ ನೋಡುತ್ತಿದ್ದಾರೆ.
ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ಸಂಪೂರ್ಣ ಮೋಡ ಕವಿದ ವಾತಾವರಣವಿದ್ದು ಮಳೆ ಬರುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಪಟಾಕಿ ಖರೀದಿಗೆ ಗ್ರಾಹಕರು ಮುಂದಾಗುತ್ತಿಲ್ಲ. ಒಂದೆಡೆ ಕೋವಿಡ್, ಜನರ ಖರೀದಿ ಶಕ್ತಿಯನ್ನು ಕಸಿದುಕೊಂಡಿದ್ದರೆ, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ವಿದೇಶದಿಂದ ಬರಬೇಕಾದ ಕಚ್ಚಾವಸ್ತುಗಳು ಬಾರದಿರುವ ಹಿನ್ನೆಲೆಯಲ್ಲಿ ಪಟಾಕಿ ದರ ಕೂಡ ಕಳೆದ ವರ್ಷಕ್ಕಿಂತ ಈ ವರ್ಷ ಶೇ.30ರಷ್ಟು ಅಧಿಕವಾಗಿದೆ. ಜತೆಗೆ ಪಟಾಕಿ ಮಳಿಗೆಗಳ ಸಂಖ್ಯೆ ಕೂಡ ಕಡಿಮೆಯಾಗಿವೆ.