ಬೆಂಗಳೂರು(ಅ.09) : ರಾಜ್ಯದಲ್ಲಿ ಮಳೆ ಆರ್ಭಟ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.
ಇದೀಗ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗುವ ಸಂಭವವಿದ್ದು,ಕರ್ನಾಟಕ ಸೇರಿ ಕೆಲವು ರಾಜ್ಯಗಳಲ್ಲಿ ಅಕ್ಟೋಬರ್ 12ರವರೆಗೆ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೇ ಉತ್ತರ ಅಂಡಮಾನ್ ಸಮುದ್ರದಲ್ಲಿ ಅಕ್ಟೋಬರ್ 10ರ ವೇಳೆಗೆ ವಾಯುಭಾರ ಕುಸಿತ ಉಂಟಾಗಲಿದ್ದು, ಇದರ ಪರಿಣಾಮ ದೇಶದ ಕೆಲವು ಭಾಗಗಳಲ್ಲಿ ಅಧಿಕ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ.
ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತದ ಪರಿಚಲನೆಯಿಂದ ಆಂಧ್ರಪ್ರದೇಶದ ಕರಾವಳಿಯ ಬಳಿ ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯವರೆಗೆ ಒಂದು ಮಾನ್ಸೂನ್ ತೊಟ್ಟಿ ದಕ್ಷಿಣ ಒಳನಾಡಿನ ಕರ್ನಾಟಕ ಮತ್ತು ರಾಯಲಸೀಮಾದಾದ್ಯಂತ ವಿಸ್ತರಿಸಿದ್ದು, ಇದು ರಾಜ್ಯದಲ್ಲಿ ಹೆಚ್ಚಿನ ಮಳೆಗೆ ಕಾರಣವಾಗಿದೆ.
ಮುಂದಿನ 4-5 ದಿನಗಳಲ್ಲಿ ಪಶ್ಚಿಮದಿಂದ ವಾಯವ್ಯ ದಿಕ್ಕಿಗೆ- ದಕ್ಷಿಣ ಒಡಿಶಾ, ಆಂಧ್ರಪ್ರದೇಶ ಉತ್ತರ ಕರಾವಳಿ ಕಡೆಗೆ ಚಂಡಮಾರುತ ಚಲನೆಯಾಗಬಹುದು ಇದರ ಪ್ರಭಾವದಿಂದಾಗಿ ಒಡಿಶಾ, ಪಶ್ಚಿಮ ಬಂಗಾಳ, ಸಿಕ್ಕಿಂ, ಕೊಂಕಣ, ಮಧ್ಯ ಮಹಾರಾಷ್ಟ್ರ, ಕರ್ನಾಟಕದ ಉತ್ತರ ಒಳನಾಡಿನಲ್ಲಿ ಹಾಗೂ ಆಂಧ್ರ ಪ್ರದೇಶ, ಕೇರಳದಲ್ಲಿ ಮೂರು ದಿನಗಳ ಕಾಲ ಅಧಿಕ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.