ಅಕ್ಟೋಬರ್ 10ರವರೆಗೆ ರಾಜ್ಯದಲ್ಲಿ ಧಾರಾಕಾರ ಮಳೆ ಸಾಧ್ಯತೆ

ಶುಕ್ರವಾರ, 8 ಅಕ್ಟೋಬರ್ 2021 (08:16 IST)
ಬೆಂಗಳೂರು(ಅ.08): ರಾಜ್ಯದಲ್ಲಿ ಮಳೆಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಅಕ್ಟೋಬರ್ 6 ಕ್ಕೆ ಮುಂಗಾರು ಅಂತ್ಯವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇನ್ನೂ ಅಕ್ಟೋಬರ್ 10ವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ  ಹವಾಮಾನ ಇಲಾಖೆ ತಿಳಿಸಿದೆ. 

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಅಕ್ಟೋಬರ್ 10ರ ತನಕ ಮಳೆ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದೆ. ನೈರುತ್ಯ ಬಂಗಾಳ ಕೊಲ್ಲಿಯಿಂದ ಪೂರ್ವ ಮಧ್ಯ ಅರೇಬಿಯನ್ ಸಮುದ್ರದವರೆಗೆ ಹಾಗೂ  ತಮಿಳುನಾಡು ಮತ್ತು ಕರ್ನಾಟಕದಾದ್ಯಂತ ಒಂದು ಮುಂಗಾರು ತೊಟ್ಟಿ ವಿಸ್ತರಿಸಿದ್ದು, ಇದು ರಾಜ್ಯದಲ್ಲಿ ಮಳೆಗೆ ಕಾರಣವಾಗಿದೆ.
ಶುಕ್ರವಾರ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗಿನಲ್ಲಿ ಮಳೆ ಹೆಚ್ಚಾಗುವ ಸೂಚನೆ ಇದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೇ ಉತ್ತರ ಒಳನಾಡಿನ ಜಿಲ್ಲೆಗಳಾದ ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಧಾರವಾಡ, ಗದಗ ಜಿಲ್ಲೆಗಳಲ್ಲಿಸಹ ಹೆಚ್ಚಿನ ಮಳೆ ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ ಮಳೆ ಆರಂಭ
ಅಲ್ಲದೇ ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೆ ಮಳೆ ಆರಂಭವಾಗಿದ್ದು, ಕೆಲ ಪ್ರದೇಶಗಳಲ್ಲಿ ಜಿಟಿಜಿಟಿ ಮಳೆ ಇದ್ದರೆ, ಇನ್ನು ಕೆಲವೆಡೆ ಹೆಚ್ಚಿನ ಮಳೆಯಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಳೆಗಾಲದ ನಿರ್ವಹಣೆಗಾಗಿ 63 ಉಪವಿಭಾಗಗಳಲ್ಲಿ ತಾತ್ಕಾಲಿಕ ನಿಯಂತ್ರಣ ಕೊಠಡಿಯನ್ನು  ಆರಂಭಿಸಿದೆ. ಅಕ್ಟೋಬರ್ ಅಂತ್ಯದವರೆಗೂ ಈ ನಿಯಂತ್ರಣ ಕೊಠಡಿಗಳು ಕಾರ್ಯ ನಿರ್ವಹಿಸಲಿವೆ ಎಂದು  ಬಿಬಿಎಂಪಿ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಮಳೆಯಾಗಿದೆ?
ಕಳೆದ 24 ಗಂಟೆಗಳಲ್ಲಿ, ಗೋವಾ ಮತ್ತು ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗಿದೆ. ಕರಾವಳಿಯ ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಸಿಕ್ಕಿಂನಲ್ಲಿ ಸಾಧಾರಣವಾದ ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ.
ಕರ್ನಾಟಕದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ, ಕೊಂಕಣ ಮತ್ತು ಗೋವಾ ಮತ್ತು ವಿದರ್ಭ ಮತ್ತು ಕರಾವಳಿ ಆಂಧ್ರಪ್ರದೇಶದ ಕೆಲ ಭಾಗಗಳಲ್ಲಿ ಸಾಧಾರಣ ಮಳೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ