ವೈಚಾರಿಕ ಭಿನ್ನಾಭಿಪ್ರಾಯ ಬೇರೆ ರೀತಿಯಲ್ಲಿ ವ್ಯಕ್ತಪಡಿಸಿ

ಸೋಮವಾರ, 27 ಸೆಪ್ಟಂಬರ್ 2021 (12:20 IST)
ಬೆಂಗಳೂರು : ಭಾರತ ಬಂದ್ ಹೆಸರಿನಲ್ಲಿ ಜನಸಾಮಾನ್ಯರಿಗೆ ತೊಂದರೆ ಆಗಬಾರದು. ರೈತ ಮುಖಂಡರು ತಮ್ಮ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಬೇರೆ ರೀತಿಯಲ್ಲಿ ವ್ಯಕ್ತಪಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
Photo Courtesy: Google

ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೋವಿಡ್, ಲಾಕ್ಡೌನ್ ನಂತರ ಜನ ಈಗಷ್ಟೇ ವ್ಯಾಪಾರ ವಹಿವಾಟುಗಳಿಗೆ ಮರಳಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೆ ಬಂದ್ ನಡೆಸುವ ಮೂಲಕ ಅವರ ಜೀವನಕ್ಕೆ ತೊಂದರೆ ನೀಡಬಾರದು. ಶಾಲಾ-ಕಾಲೇಜು ಮಕ್ಕಳಿಗೂ ತೊಂದರೆಯಾಗಿದೆ ಎಂದರು.
ಬಿಜೆಪಿ ತಾಲಿಬಾನ್ ಇದ್ದಂತೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬೊಮ್ಮಾಯಿ, "ಕಾಂಗ್ರೆಸ್ ಗುಲಾಮಗಿರಿಯ ಪಕ್ಷ, ದೇಶ ಭಕ್ತಿಯೂ ಅವರಿಗೆ ಗುಲಾಮಗಿರಿಯಾಗಿಯೇ ಕಾಣಿಸುತ್ತಿದೆ. ನಮ್ಮದು ದೇಶಭಕ್ತಿಯ ಪಕ್ಷ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ನಮ್ಮ ಮಕ್ಕಳನ್ನು 21ನೇ ಶತಮಾನಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು" ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಮಾತುಗಳನ್ನು ಕೇಳಿದರೆ ಅವರು ಹತಾಶರಾಗಿರುವಂತೆ ಕಾಣಿಸುತ್ತಿದೆ. ಅವರು ಮಾಜಿ ಮುಖ್ಯಮಂತ್ರಿಗಳು. ಬಿಜೆಪಿ ಬಗ್ಗೆ ನೀಡಿರುವ ಹೇಳಿಕೆ ಅವರು ಹಿಂದೆ ವಹಿಸಿಕೊಂಡಂತಹ ಜವಾಬ್ದಾರಿಗಳಿಗೆ ತಕ್ಕುದಾದುದಲ್ಲ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿ ನಿವಾಸಕ್ಕೆ ಬಿಗಿ ಭದ್ರತೆ:
ಭಾರತ ಬಂದ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಿ ಮತ್ತು ಖಾಸಗಿ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಅವರಿಂದ ಭದ್ರತಾ ಪರಿಶೀಲನೆ ನಡೆಸಲಾಯಿತು.
ಕುಮಾರಕೃಪಾ ರಸ್ತೆಯಲ್ಲಿರುವ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ಅಧಿಕೃತ ನಿವಾಸ ಹಾಗೂ ಆರ್.ಟಿ. ನಗರದಲ್ಲಿರುವ ಖಾಸಗಿ ನಿವಾಸಗಳಿಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಉತ್ತರ ಕರ್ನಾಟಕದ ಪ್ರವಾಸದಲ್ಲಿರುವ ಬೊಮ್ಮಾಯಿ ಅವರು ಮಧ್ಯಾಹ್ನ ನಗರಕ್ಕೆ ವಾಪಸ್ಸಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ