2024ಕ್ಕೆ ಮೆಟ್ರೋ ಎರಡನೇ ಹಂತ ಪೂರ್ಣಗೊಳಿಸಲು ಸೂಚನೆ: ಸಿಎಂ ಬೊಮ್ಮಾಯಿ
ಮೆಟ್ರೋ ಎರಡನೇ ಹಂತದ ಕಾಮಗಾರಿ 2025ಕ್ಕೆ ಪೂರ್ಣಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಆದರೆ 2024ರೊಳಗೆ ಕಷ್ಟ ಆದರೂ ಸರಿ ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿ ವರೆಗೂ ವಿಸ್ತರಣೆಗೊಂಡ 7.5 ಕಿ.ಮೀ. ದೂರದ ಸಂಚಾರವನ್ನು ಉದ್ಭಾಟಿಸಿದ ನಂತರ ಅವರು ಮಾತನಾಡಿದರು.
ಇಂದು ಉದ್ಘಾಟನೆ ಮಾಡಿರುವ ಮೆಟ್ರೋ ಮಾರ್ಗ ಪ್ರಮುಖ ಭಾಗವಾಗಿದ್ದು, ಎಲ್ಲಿ ಜಾಗ ಸಿಗಲಿದೆ ಅಲ್ಲಿ ಮೆಟ್ರೋ ಮಾಡಬೇಕು. ಈ ಏಳುವರೆ ಕಿ.ಮೀ ಭಾಗದಲ್ಲಿ ಅತಿ ಹೆಚ್ಚು ಜನಸಂದಣಿ ಇದೆ. ಈ ಭಾಗದಲ್ಲಿ ಮೆಟ್ರೋ ಮಾಡಿದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನ ಎಂದರು.
ಮೆಟ್ರೋ ಕೇವಲ ಬೆಂಗಳೂರಿನ ನಾಡಿ ಅಲ್ಲ, ಭವಿಷ್ಯದ ಜೀವನಾಡಿ. ಮೆಟ್ರೋ ಯೋಜನೆ ಬೆಂಗಳೂರಿಗೆ ಬಹು ಮುಖ್ಯ. ಮೆಟ್ರೋ ಇರುವುದರಿಂದ ಐಟಿ ಜನರು ಇಲ್ಲಿಗೆ ಬರುತ್ತಿದ್ದಾರೆ. ಮೂರು ಕಮ್ಯುನಿಕೇಷನ್ ಮಾರ್ಗ ಮಾಡ್ತಿದ್ದೇವೆ. ವಿಮಾನ ನಿಲ್ದಾಣಕ್ಕೆ ಮಾರ್ಗ ಮಾಡ್ತಿದ್ದೇವೆ. ಎಲ್ಲೂ ಕೂಡ ಈ ಯೋಜನೆ ಇಲ್ಲ. ಅದನ್ನ ನಾವು ಮಾಡ್ತಿದ್ದೇವೆ ಎಂದು ಸರ್ಮಥಿಸಿಕೊಂಡರು.
ನಮ್ಮಲ್ಲಿ ದುಡಿಯುವ ವರ್ಗ ಇದೆ. ಅವುಗಳನ್ನ ಗಮನದಲ್ಲಿಟ್ಟುಕೊಂಡಿದ್ದೇವೆ. 75 ಕೊಳಗೇರಿಗಳಲ್ಲಿ ಮೂಲಭೂತ ಸೌಕರ್ಯಗಳಾಗಿ ಮಾಡುತ್ತೇವೆ. ಸಂಚಾರಿ ದಟ್ಟಣೆ ಇರುವ ಎಲ್ಲಾ ಮಾರ್ಗಗಳಿಗೆ ಯಾವುದೇ ಅಡೆತಡೆ ಇಲ್ಲದೆ ಮುಕ್ತ ಸಂಚಾರ ಮಾಡುತ್ತೇವೆ. ಜನ ವಸತಿ ಪ್ರದೇಶ, ಬಿಬಿಎಂಪಿ, 110 ಹಳ್ಳಿಗಳಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಬೊಮ್ಮಾಯಿ ವಿವರಿಸಿದರು.