ವರುಣನ ಆರ್ಭಟಕ್ಕೆ ಈಗಾಗಲೇ ಕಂಗೆಟ್ಟಿರುವ ತಮಿಳುನಾಡಿಗೆ ನವೆಂಬರ್ 26ರವರೆಗಂತೂ ಮಳೆಯಿಂದ ಮುಕ್ತಿಯಿಲ್ಲ.
ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಜಿಲ್ಲೆಗಳಲ್ಲಿ ನವೆಂಬರ್ 26ರವರೆಗೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. ನವೆಂಬರ್ 24ರವರೆಗೆ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಮಳೆಯಾಗಲಿದೆ. ಹಾಗೇ, ಉಳಿದ ಕಡೆಗಳಲ್ಲೂ ಮೋಡಮುಸುಕಿದ ವಾತಾವರಣವೇ ಇರಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ತಮಿಳುನಾಡಿನಲ್ಲಿ ವಿಪರೀತ ಮಳೆ ಸುರಿಯಲು ಪ್ರಾರಂಭಿಸಿ ಅದಾಗಲೇ ವಾರದ ಮೇಲಾಯಿತು. ಅದರೊಂದಿಗೆ ಆಂಧ್ರಪ್ರದೇಶ, ಕೇರಳ, ಪುದುಚೇರಿಯಲ್ಲೂ ಒಂದೇಸಮ ಮಳೆಯಾಗುತ್ತಿದೆ. ಐಎಂಡಿ ದಕ್ಷಿಣ ತಮಿಳುನಾಡು, ಪುದುಕೊಟ್ಟೈ ಮತ್ತು ಡೆಲ್ಟಾ ಜಿಲ್ಲೆಗಳಲ್ಲಿ ಅಲ್ಲಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹಳದಿ ಅಲರ್ಟ್ ಘೋಷಿಸಲಾಗಿದೆ. ಇನ್ನು ಮುಂದಿನ ಐದು ದಿನಗಳ ಕಾಲ ತಮಿಳುನಾಡಿನ ಎರೋಡ್, ನಮಕ್ಕಲ್, ಕಲ್ಲಕುರಿಚಿ ಮತ್ತು ಪೆರಂಬಲೂರ್ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ. ಅದರಲ್ಲೂ ಇಂದು ತಿರುನೇಲ್ವೇಲಿ, ತೂತುಕುಡಿ, ಮಧುರೈ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಬೀಳಲಿದೆ ಎಂದು ಐಎಂಡಿ ಊಹಿಸಿದೆ.
ಇನ್ನು ಶುಕ್ರವಾರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನ ಕರಾವಳಿ ತೀರಗಳಲ್ಲಿ ಗುಡುಗಿನೊಂದಿಗೆ ಭಾರಿ ಮಳೆಯಾಗಲಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.