ಬೆಂಗಳೂರು : ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ರಣ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ.
ಈ ನಡುವೆ ಮುಂಜಾಗ್ರತಾ ಕ್ರಮವಾಗಿ ಕೊಡಗು, ಉಡುಪಿ, ಚಿಕ್ಕಮಗಳೂರು ಸೇರಿದಂತೆ 5 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಹವಾಮಾನ ಇಲಾಖೆ ಮತ್ತೆರಡು ದಿನ ಆರೆಂಜ್ ಅಲರ್ಟ್ ಸೂಚಿಸಿದೆ.
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯ ಪರಿಣಾಮ ಮರ, ವಿದ್ಯುತ್ ಕಂಬ ಧರೆಗುರುಳಿದೆ. ಹಲವೆಡೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದ್ದು, ಮೊಬೈಲ್ ನೆಟ್ವರ್ಕ್ ಸಿಗದಂತಾಗಿದೆ.
ಭಾಗಮಂಡಲದ ತ್ರಿವೇಣಿ ಸಂಗಮ ಕಳೆದೆರಡು ದಿನಗಳಿಂದ ತುಂಬಿ ಹರಿಯುತ್ತಿದೆ. ಹೀಗೆ ಮಳೆ ಮುಂದುವರಿದರೆ ಭಾಗಮಂಡಲದ ಕೇಶಮುಂಡನ ಸೇರಿದಂತೆ ಸುತ್ತಮತ್ತಲಿನ ಪ್ರದೇಶ ಜಲಾವೃತಗೊಳ್ಳಲಿದೆ. ಮಡಿಕೇರಿ ವಿರಾಜಪೇಟೆ ಸಂಪರ್ಕ ಕಲ್ಪಿಸುವ ಬೇತ್ರಿ ನದಿಯಲ್ಲಿಯೂ ನೀರಿನ ಪ್ರಮಾಣ ಏರಿಕೆಯಾಗಿದೆ.
ಮತ್ತೊಂದೆಡೆ ಉಡುಪಿಯಲ್ಲಿ 3 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಕುಂದಾಪುರ ಭಾಗದ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದ್ದು, ಕುಬ್ಜಾ ನದಿ ತುಂಬಿ ಹರಿಯುತ್ತಿದೆ. ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಗೆ ಮಳೆ ನೀರು ಹರಿದಿದೆ.
ಪ್ರತಿವರ್ಷದಂತೆ ನದಿನೀರು ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸುತ್ತಿದ್ದಂತೆ ಅರ್ಚಕರು ದೇವಿಗೆ ಆರತಿಯನ್ನು ಬೆಳಗಿದರು. 2 ದಿನ ಆರೆಂಜ್ ಅಲರ್ಟ್ ಹಿನ್ನೆಲೆ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ.