ಬೆಂಗಳೂರು : ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ರೈತರೊಬ್ಬರಿಗೆ ಗೌರವ ಡಾಕ್ಟರೇಟ್ ನೀಡಲು ಸರ್ಕಾರ ನಿರ್ಧರಿಸಿದೆ. ರಾಜ್ಯದ ಇತಿಹಾಸದಲ್ಲೇ ಇಂಥದ್ದೊಂದು ಪ್ರಯೋಗ ನಡೆಯುತ್ತಿರುವುದು ಇದೇ ಮೊದಲು.
ಈ ವರ್ಷದಿಂದಲೇ ಇದನ್ನು ಚಾಲ್ತಿಯಲ್ಲಿ ತರಬೇಕಿತ್ತು. ಆದರೆ ಕರೊನಾ ಕಾರಣದಿಂದ ಇದನ್ನು ಮುಂದೂಡಲಾಗಿದೆ. ಸಾಧಕರನ್ನು ಗುರುತಿಸುವುದು ಈ ವರ್ಷ ಸ್ವಲ್ಪ ಕಷ್ಟವಾಯಿತು. ಆದ್ದರಿಂದ ಮುಂದಿನ ವರ್ಷದಿಂದ ಇದು ಜಾರಿಗೆ ಬರಲಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ರಾಜೇಂದ್ರ ಪ್ರಸಾದ್ ಹೇಳಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಮಾಡಿದ ಮಾದರಿ ರೈತರನ್ನು ಗುರುತಿಸಿ ಗೌರವಿಸುವುದು ಕೃಷಿ ವಿವಿಯ ಉದ್ದೇಶವಾಗಿದೆ. ಯಾವ ವಿವಿಯೂ ಇದುವರೆಗೆ ಇಂತಹ ನಿರ್ಧಾರ ಕೈಗೊಂಡಿರಲಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಪತ್ರಕರ್ತರ ಜತೆ ಮಾತನಾಡಿದ ರಾಜೇಂದ್ರ ಪ್ರಸಾದ್ ಈ ಮಾಹಿತಿ ಹಂಚಿಕೊಂಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಮಾಡುವ, ವರಮಾನ ಗಳಿಕೆಯ ಹೊಸ ಮಾರ್ಗ ತೋರಿಸುವ ಪ್ರಗತಿಪರ ರೈತರನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೇಂದ್ರ ಸರಕಾರದ ಹೊಸ ಶೈಕ್ಷಣಿಕ ನೀತಿ ಕುರಿತೂ ಅವರು ಮಾಹಿತಿ ನೀಡಿದರು. ಇದರ ಕುರಿಂತೆ ಕೃಷಿ ವಿಶ್ವವಿದ್ಯಾನಿಲಯ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಶೇ.70ರಷ್ಟು ಹೊಸ ಶೈಕ್ಷಣಿಕ ರೀತಿಯಲ್ಲೆ ಚಟುವಟಿಕೆಗಳು ನಡೆಯುತ್ತಿವೆ. ಆ ಹಿನ್ನೆಲೆಯಲ್ಲಿ ಹೊಸ ಶೈಕ್ಷಣಿಕ ನೀತಿಗೆ ಯಾವುದೇ ರೀತಿಯ ತೊಂದರೆ ಉಂಟಾಗದು ಎಂದು ಮಾಹಿತಿ ನೀಡಿದರು.