ಮನೆಲಿ ಅಂಗವಿಕಲರಿಗೆ ಲಸಿಕೆ: ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್
ಸೋಮವಾರ, 20 ಸೆಪ್ಟಂಬರ್ 2021 (15:03 IST)
ನವದೆಹಲಿ : ಅಶಕ್ತರು ಮತ್ತು ಅಂಗವಿಕಲರಿಗಾಗಿ 'ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ' ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಈ ಕುರಿತು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿರುವ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠ, 'ಅಂಗವಿಕಲರಿಗೆ ಲಸಿಕೆ ನೀಡಲು ಈವರೆಗೆ ಕೇಂದ್ರ ಕೈಗೊಂಡಿರುವ ಕ್ರಮಗಳು ಮತ್ತು ಹೊಸ ಕ್ರಮಗಳಿಗಾಗಿ ಪ್ರಸ್ತಾವನೆ ಸಲ್ಲಿಸಿರುವ ಕುರಿತು ಮಾಹಿತಿ ನೀಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಕೇಳಿದೆ.
ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಇವರಾ ಫೌಂಡೇಷನ್ ಸ್ವಯಂ ಸೇವಾ ಸಂಸ್ಥೆ ಪರ ಹಾಜರಾಗಿದ್ದ ವಕೀಲ ಪಂಕಜ್ ಸಿನ್ಹಾ, 'ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಯನ್ನು ನೀಡಬಹುದು' ಎಂದು ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿರುವ ದಾಖಲೆ ಸೇರಿದಂತೆ ಎರಡು ದಾಖಲೆಯನ್ನು ಉಲ್ಲೇಖಿಸಿದರು. 'ಜಾರ್ಖಂಡ್ ಮತ್ತು ಕೇರಳದಲ್ಲಿ ಈ ವಿಧಾನ ಯಶಸ್ವಿಯಾಗಿದ್ದು, ಇದನ್ನು ಬೇರೆ ರಾಜ್ಯಗಳಿಗೂ ಅಳವಡಿಸಬಹುದು' ಎಂದು ತಿಳಿಸಿದರು.