ನವದೆಹಲಿ : ಹೊಸ ವರ್ಷದಿಂದ ಹೊಸ ನಿಯಮ ಜಾರಿಯಾಗಿದೆ. ದೆಹಲಿ ಸರ್ಕಾರ ಮೊದಲೇ ಘೋಷಿಸಿದಂತೆ 10 ವರ್ಷಕ್ಕಿಂತ ಹಳೆ ಡೀಸೆಲ್ ವಾಹನದ ರಿಜಿಸ್ಟ್ರೇಶನ್ ರದ್ದು ಮಾಡಲಾಗಿದೆ.
ಮೊದಲ ಹಂತದಲ್ಲಿ ದೆಹಲಿ ಸರ್ಕಾರ ಬರೋಬ್ಬರಿ 1 ಲಕ್ಷ ಹಳೇ ಡೀಸೆಲ್ ವಾಹನದ ರಿಜಿಸ್ಟ್ರೇಶನ್ ರದ್ದು ಮಾಡಲಾಗಿದೆ. ಇನ್ನು 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನದ ರಿಜಿಸ್ಟ್ರೇಶನ್ ಶೀಘ್ರದಲ್ಲೇ ರದ್ದಾಗಲಿದೆ ಎಂದು ದೆಹಲಿ ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ನೋಂದಣಿ ರದ್ದಾಗಿರುವ ಕಾರುಗಳನ್ನು ಮತ್ತೆ ರಸ್ತೆಗಿಳಿಸಿದರೆ ದುಬಾರಿ ದಂಡ ಪಾವತಿಸಬೇಕು. ಇಷ್ಟೇ ಅಲ್ಲ ಪೊಲೀಸರು ವಾಹನವನ್ನು ವಶಕ್ಕೆ ಪಡೆಯಲಿದ್ದಾರೆ. ಬಳಿಕ ಸಮೀಪದ ವಾಹನ ಗುಜುರಿ ಕೇಂದ್ರಕ್ಕೆ ರವಾನಿಸಲಿದ್ದಾರೆ.
ಹೀಗಾಗಿ ನೋಂದಣಿ ರದ್ದಾಗಿರುವ ವಾಹನಗಳನ್ನು ಯಾವುದೇ ದಾಖಲೆ ಇಲ್ಲದೆ ರಸ್ತಗಿಳಿಸಿದರೆ ದಂಡದ ಜೊತೆಗೆ ವಾಹನ ಕೂಡ ಕೈತಪ್ಪಿಹೋಗಲಿದೆ.
ದೆಹಲಿಯಲ್ಲಿ 15 ವರ್ಷ ಮೇಲ್ಪಟ್ಟ 43 ಲಕ್ಷ ಪೆಟ್ರೋಲ್ ವಾಹನಗಳಿವೆ. ಇದರಲ್ಲಿ 32 ಲಕ್ಷ ದ್ವಿಚಕ್ರ ವಾಹ ಹಾಗೂ 11 ಲಕ್ಷ ಕಾರುಗಳಾಗಿದೆ. ಪೆಟ್ರೋಲ್ ವಾಹನಗಳ ಡಿ ರಿಡಿಸ್ಟ್ರೇಶನ್ ಕುರಿತು ದೆಹಲಿ ಶೀಘ್ರದಲ್ಲೆ ಪ್ರಕಟಣೆ ಹೊರಡಿಸಲಿದೆ.
ಜನವರಿ 1, 2022ರಿಂದ ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನ ನಿಷೇಧಕ್ಕೆ ಹೇರಲಾಗಿದೆ. ಜನವರಿ 1 ರಂದು ದೆಹಲಿ ಸರ್ಕಾರ 1,01,247 ಡೀಸೆಲ್ ವಾಹನಗಳ ರಿಜಿಸ್ಟ್ರೇಶನ್ ರದ್ದು ಮಾಡಲಾಗಿದೆ. ನೋಂದಣಿ ರದ್ದು ಮಾಡಿದ ವಾಹನಗಳ ಪೈಕಿ 87,000 ಕಾರುಗಳಾಗಿದೆ.