ಇಸ್ಲಾಮಾಬಾದ್ : ಪಾಕಿಸ್ತಾನ ಸಂಸತ್ನಲ್ಲಿ ಶನಿವಾರ ತಡರಾತ್ರಿ ದೊಡ್ಡ ಹೈಡ್ರಾಮಾವೇ ನಡೆಯಿತು.
ವಿಶ್ವಾಸಮತ ಗಳಿಸುವಲ್ಲಿ ವಿಫಲರಾದ ಇಮ್ರಾನ್ ಖಾನ್ ಅಧಿಕಾರ ಅಂತ್ಯವಾಗಿದೆ. ಅಧಿಕಾರ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಕಸರತ್ತು ನಡೆಸಿದ್ದ ಇಮ್ರಾನ್ ಖಾನ್ ಅವರ 4 ವರ್ಷಗಳ ಅಧಿಕಾರವನ್ನು ಕಳೆದುಕೊಂಡಿದ್ದಾರೆ.
ಈ ಮೂಲಕ ಇಮ್ರಾನ್ ಖಾನ್ ಅವರು ಅವಿಶ್ವಾಸ ಮತದಲ್ಲಿ ಸೋತ ಪಾಕಿಸ್ತಾನದ ಮೊದಲ ಪ್ರಧಾನಿಯಾಗಿದ್ದಾರೆ. ಸದನದಲ್ಲಿ ಹಾಜರಿದ್ದ ಪ್ರತಿಪಕ್ಷಗಳ 176 ಹಾಗೂ ಆಡಳಿತ ಪಕ್ಷದ 22 ಸದಸ್ಯರು ನಿರ್ಣಯದ ಪರವಾಗಿ ಮತ ಹಾಕಿದರು.
ಇದಕ್ಕೂ ಮುನ್ನ ದಿನವಿಡೀ ಪಾಕಿಸ್ತಾನದಲ್ಲಿ ಹೈಡ್ರಾಮವೇ ನಡೆದಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಲು ಸ್ಪೀಕರ್ ನಿರಾಕರಿಸಿದರು. ಅದೇ ವೇಳೆ, ಸ್ಪೀಕರ್ ಕ್ರಮದಿಂದ ಸಿಟ್ಟಿಗೆದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾತ್ರೋರಾತ್ರಿ ಕಲಾಪ ಆರಂಭಿಸಿ, ಸ್ಪೀಕರ್ ಹಾಗೂ ಪ್ರಧಾನಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲು ಮುಂದಾದರು.
ಸಿಜೆ ನೇತೃತ್ವದ ಪಂಚ ಸದಸ್ಯರ ಪೀಠದ ಆದೇಶದಂತೆ ಶನಿವಾರ ಅವಿಶ್ವಾಸ ನಿಲುವಳಿಯನ್ನು ಮತಕ್ಕೆ ಹಾಕಬೇಕಿತ್ತು. ಅದರಂತೆ ಶನಿವಾರ ಮಧ್ಯಾಹ್ನ ರಾಷ್ಟ್ರೀಯ ಅಸೆಂಬ್ಲಿ ಕಲಾಪ ಆರಂಭವಾಯಿತು.