ಐತಿಹಾಸಿಕ ಕ್ಷಣಕ್ಕೆ ಭಾರತ ಕಾತರ! ಇಂದು ಸಂಜೆ 6:04ಕ್ಕೆ ಸಾಫ್ಟ್ ಲ್ಯಾಂಡಿಂಗ್
ಬುಧವಾರ, 23 ಆಗಸ್ಟ್ 2023 (07:06 IST)
ಬೆಂಗಳೂರು : ಚಂದ್ರನ ಅಂಗಳದಲ್ಲಿ ನಮ್ಮ ದೇಶದ ಗಗನನೌಕೆ ಇಳಿಯುವ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ.
ಕೊನೆಯ ಆ 20 ನಿಮಿಷಗಳು ಬಹುಶಃ ಪ್ರತಿಯೊಬ್ಬ ಭಾರತೀಯರ ಎದೆಬಡಿತ ಹೆಚ್ಚಾಗಿರುತ್ತೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ನೌಕೆಯ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವ ಈ ಮಹತ್ವದ ಕ್ಷಣವನ್ನ ಕಣ್ತುಂಬಿಕೊಳ್ಳಲು ಜನ ಕಾತುರವಾಗಿದ್ದಾರೆ.
2019ರ ಸೆಪ್ಟೆಂಬರ್ 6ರಂದು ಆ ಕ್ಷಣದಲ್ಲಿ ಉಂಟಾದ ಆಘಾತ, ನೋವು ಮತ್ತೆ ಎದುರಾಗದಿರಲಿ ಅನ್ನೋದು ಕೋಟ್ಯಂತರ ಜನರ ಪ್ರಾರ್ಥನೆ. ಅದಕ್ಕಾಗಿ ವಿಜ್ಞಾನಿಗಳು ಮಾತ್ರವಲ್ಲ, ಜನಸಾಮಾನ್ಯರೂ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಪ್ರಗ್ಯಾನ್ ರೋವರ್ ಅನ್ನು ಹೊತ್ತ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿದ್ದು, ದಕ್ಷಿಣ ಧ್ರುವದ ಮೇಲೆ ಸಂಜೆ 6:04ರ ವೇಳೆಗೆ ಯಾವುದೇ ಅಡೆತಡೆ ಇಲ್ಲದೇ ಚಂದ್ರನ ಅಂಗಳದಲ್ಲಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸುವ ಭರವಸೆ ಮೂಡಿಸಿದೆ. ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ-3 ನೌಕೆಯ ಇಷ್ಟು ದಿನದ ಪಯಣದಂತೆಯೇ ಕೊನೆಯ 20 ನಿಮಿಷಗಳ ಯಾನ ಅತ್ಯಂತ ನಿರ್ಣಾಯಕ.
ಕೌತುಕಭರಿತ ಲ್ಯಾಂಡಿಂಗ್ ಆಪರೇಷನ್ ಪ್ರಕ್ರಿಯೆಯನ್ನ ಇಸ್ರೋ ಇಂದು ಸಂಜೆ 5 ಗಂಟೆ 20 ನಿಮಿಷದಿಂದ ಲೈವ್ ಟೆಲಿಕಾಸ್ಟ್ ಮಾಡಲಿದೆ. ನಿಮ್ಮ ಪಬ್ಲಿಕ್ ಟಿವಿ ಕೂಡ ಚಂದ್ರ ಚುಂಬನದ ಕ್ಷಣಕ್ಷಣದ ಮಾಹಿತಿಯನ್ನು ವಿಶ್ಲೇಷಣೆ ಸಹಿತ ನಿಮಗೆ ಒದಗಿಸಲಿದೆ. ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆ ಮುಗಿದ ಬಳಿಕ ಇಸ್ರೋ ವಿಜ್ಞಾನಿಗಳನ್ನು ಜೋಹನ್ಸ್ಬರ್ಗ್ನಲ್ಲಿರುವ ಪ್ರಧಾನಿ ಮೋದಿ ವರ್ಚೂವಲ್ ಆಗಿ ಭೇಟಿ ಮಾಡಲಿದ್ದಾರೆ.