ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ ಗ್ರಾಹಕರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸಿ ಮತ್ತಷ್ಟು ಹತ್ತಿರವಾಗುತ್ತಿದೆ. ಇದೀಗ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಎರಡು ಹೊಸ ಯೋಜನೆಗಳನ್ನು ಬಿಡುಗಡೆ ಮಾಡುವ ಮೂಲಕ ಅಚ್ಚರಿ ನೀಡಿದೆ.
ಅಷ್ಟೇ ಅಲ್ಲದೆ ನೆಟ್ಫ್ಲಿಕ್ಸ್ ಚಂದಾದಾರಿಕೆ ಕೂಡ ನೀಡುತ್ತಿದೆ. ಜಿಯೋದಲ್ಲಿ ಈ ಹಿಂದೆ ನೆಟ್ಫ್ಲಿಕ್ಸ್ ಚಂದಾದಾರಿಕೆ ಆಯ್ದ ಜಿಯೋ ಪೋಸ್ಟ್ಪೇಯ್ಡ್ ಮತ್ತು ಜಿಯೋ ಫೈಬರ್ ಯೋಜನೆಗಳೊಂದಿಗೆ ಮಾತ್ರ ಲಭ್ಯವಿತ್ತು.
ಇದೀಗ ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಯಲ್ಲಿ ನೆಟ್ಫ್ಲಿಕ್ಸ್ ಸಬ್ಸ್ಕ್ರಿಪ್ಷನ್ ಅನ್ನು ಬಿಡುಗಡೆ ಮಾಡಿದೆ. ಇದರಿಂದ 400 ಮಿಲಿಯನ್ಗಿಂತಲೂ ಹೆಚ್ಚು ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ ಈ ಹೊಸ ಪ್ಲಾನ್ ಮೂಲಕ ನೆಟ್ಫ್ಲಿಕ್ಸ್ ಚಂದಾದಾರಿಕೆಯನ್ನು ಪ್ರವೇಶಿಸಬಹುದು.
ಜಿಯೋ ಪರಿಚಯಿಸಿರುವ ಮೊದಲ ಪ್ರಿಪೇಯ್ಡ್ ಯೋಜನೆಯು 1099 ರೂ. ಆಗಿದೆ. ಈ ಯೋಜನೆಯು ನೆಟ್ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಆದರೆ ಇದು ಮೊಬೈಲ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ ಎಂಬುದನ್ನು ಗಮನಿಸಬೇಕು. ನೆಟ್ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ, ನೀವು ಜಿಯೋ ವೆಲ್ಕಮ್ ಆಫರ್ನೊಂದಿಗೆ ಅನಿಯಮಿತ 5 G ಡೇಟಾವನ್ನು (ದಿನಕ್ಕೆ 2GB) ಪಡೆಯುತ್ತೀರಿ. ಜೊತೆಗೆ ಅನಿಯಮಿತ ವಾಯಿಸ್ ಕರೆಯನ್ನು ಸಹ ಪಡೆಯುತ್ತೀರಿ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.