ಕೋವ್ಯಾಕ್ಸಿನ್‌ ತೀವ್ರ ಅಭಾವ!

ಗುರುವಾರ, 10 ಫೆಬ್ರವರಿ 2022 (13:20 IST)
ಬೆಂಗಳೂರು : ರಾಜ್ಯದಲ್ಲಿ ಕೋವ್ಯಾಕ್ಸಿನ್‌ ಲಸಿಕೆಯ ತೀವ್ರ ಅಭಾವದಿಂದ ಒಂದು ಕಡೆ ಮಕ್ಕಳ ಕೋವಿಡ್‌ ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗಿದ್ದರೆ,
 
ಮತ್ತೊಂದು ಕಡೆ ಮುನ್ನೆಚ್ಚರಿಕೆ ಡೋಸ್‌ ಪಡೆಯಲು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಮತ್ತು ಸಹ ಅಸ್ವಸ್ಥತೆ ಹೊಂದಿರುವ ಹಿರಿಯ ನಾಗರಿಕರು ಲಸಿಕೆಗಾಗಿ ಅಲೆದಾಡುತ್ತಿದ್ದಾರೆ.

ಜನವರಿ 3ರಿಂದ 15-18 ವರ್ಷದ ಮಕ್ಕಳಿಗೆ ಕೋವಿಡ್‌-19 ಲಸಿಕೆ ನೀಡುವ ಅಭಿಯಾನ ಆರಂಭಿಸಿದ ಕೇಂದ್ರ ಸರ್ಕಾರ ಕೋವ್ಯಾಕ್ಸಿನ್‌ ಲಸಿಕೆ ಮಾತ್ರ ನೀಡಲು ಅನುಮತಿ ನೀಡಿತ್ತು.

ಪ್ರಾರಂಭದಲ್ಲಿ ರಾಜ್ಯಾದ್ಯಂತ ಭಾರಿ ಉತ್ಸಾಹದಿಂದ ಮಕ್ಕಳ ಲಸಿಕೆ ಅಭಿಯಾನ ಆರಂಭಗೊಂಡಿತಾದರೂ ಎರಡನೇ ಡೋಸ್‌ ಪಡೆಯಲು ಮಕ್ಕಳು ಲಸಿಕಾ ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ. ವಿಶೇಷವೆಂದರೆ ಇನ್ನೂ ಸುಮಾರು 8 ಲಕ್ಷ ಮಂದಿ ಮಕ್ಕಳು ಮೊದಲ ಡೋಸ್‌ ಪಡೆಯಲು ಬಾಕಿ ಇದ್ದಾರೆ.

ಜನವರಿ 3ರಿಂದ 12 ರೊಳಗೆ ಲಸಿಕೆ ಪಡೆದುಕೊಂಡ 17.64 ಲಕ್ಷ ಮಂದಿ ಮಕ್ಕಳು ಎರಡನೇ ಡೋಸ್‌ ಪಡೆಯಲು ಅರ್ಹರಾಗಿದ್ದಾರೆ. ಆದರೆ ಫೆ.9ರ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಕೇವಲ 7.10 ಲಕ್ಷ ಮಕ್ಕಳು ಮಾತ್ರ (ಶೇ. 40) ಎರಡನೇ ಡೋಸ್‌ ಪಡೆದಿದ್ದಾರೆ.

ಕೆಲವು ಶಾಲೆಗಳಲ್ಲಿ ಒಂದು ಸುತ್ತಿನ ಎರಡನೇ ಡೋಸ್‌ ಲಸಿಕೆ ಅಭಿಯಾನ ನಡೆದಿದೆ. ಆದರೆ ಅಂದು ಲಸಿಕೆ ಪಡೆಯಲು ಸಾಧ್ಯವಾಗದವರು ಶಾಲೆ ಅಥವಾ ಮನೆಗೆ ಹತ್ತಿರದ ಲಸಿಕಾ ಕೇಂದ್ರಗಳಿಗೆ ಲಸಿಕೆಗಾಗಿ ಅಲೆದಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ